ಬೆಂಗಳೂರು:ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆಯು ಮೂರು ದಿನಗಳ ಕಾಲ ನಡೆಯಲಿದ್ದು, ಅಧಿಕೃತವಾಗಿ ಇಂದು ಚಾಲನೆ ಸಿಗಲಿದೆ. ಬಸವನಗುಡಿ ಸುತ್ತಮುತ್ತ ಪರಿಷೆ ರಂಗೇರಿದೆ. ಭಾನುವಾರ ರಜೆ ಹಿನ್ನೆಲೆ ದೊಡ್ಡ ಗಣೇಶ ಮತ್ತು ದೊಡ್ಡ ಬಸವಣ್ಣ ದೇವಸ್ಥಾನದ ಸುತ್ತಮುತ್ತಲಿನ ಜನ ಸಾಗರವೇ ನೆರೆದಿತ್ತು. ಇಂದು ಅಧಿಕೃತ ಚಾಲನೆ ಸಿಗಲಿದ್ದು, ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಭಾನುವಾರ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಸಚಿವರು ದೊಡ್ಡ ಗಣೇಶನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಡಲೆಕಾಯಿ ಪರಿಷೆಯ ಸಿದ್ಧತೆಗಳನ್ನು ಪರಿಶೀಲಿಸಿದರು.
ಹೋಂಗಾರ್ಡ್ ಸೇರಿದಂತೆ 600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ಕಡಲೆಕಾಯಿ ಪರಿಷೆಗೆ 7-8 ಲಕ್ಷ ಜನರು ಬರುವ ಸಾಧ್ಯತೆಯಿದೆ. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಬರುವ ಜನರಿಗೆ ಪ್ರಸಾದದ ವ್ಯವಸ್ಥೆ ಇರಲಿದೆ ಎಂದರು.
ಈ ವರ್ಷ ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಗೆ ನಾನಾ ಜಿಲ್ಲೆಗಳಿಂದ 200 ರೈತರು ಹಾಗೂ ತಮಿಳುನಾಡು, ಆಂಧ್ರ ಸೇರಿದಂತೆ ನಾನಾ ರಾಜ್ಯಗಳಿಂದ ವ್ಯಾಪಾರಸ್ಥರು ಬರಲಿದ್ದು, ಹತ್ತಾರು ಬಗೆಯ ಕಡಲೆಕಾಯಿಗಳ ಮಾರಾಟಕ್ಕೆಂದೇ ಒಂದು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಜತೆಗೆ, ಇತರೆ ಪರಿಕರಗಳ ಮಾರಾಟಕ್ಕೆ ಸಹಸ್ರಾರು ಮಳಿಗೆಗಳನ್ನು ತೆರೆಯಲಾಗಿದೆ. ಯಾವುದೇ ಅವಘಡಗಳು ಸಂಭವಿಸದಂತೆ ಮಾರ್ಷಲ್ಸ್ ಹಾಗೂ ಪೊಲೀಸರ ನಿಯೋಜನೆ ಮಾಡಲಾಗಿದೆ.