ಬೆಂಗಳೂರಿನ : ಕಳೆದ ಮೂರು ದಿನಗಳಿಂದ ನಗರದ ಅರಮನೆ ಮೈದಾನದಲ್ಲಿ ನಡೆದ "ವಿಶ್ವ ಕಾಫಿ ಸಮಾವೇಶ" ಗುರುವಾರ ತೆರೆ ಕಂಡಿತು. ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಜಿ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಮಾರೋಪ ಸಮಾರಂಭಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ದಾಪುಗಾಲು ಹಾಕುತ್ತಿದೆ. ಶೇ. 10 ರಿಂದ 20 ರಷ್ಟು ಮೌಲ್ಯವರ್ಧಿತ ದರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕೊಲಂಬಿಯನ್ ಹೊರತುಪಡಿಸಿ ಭಾರತೀಯ ರೊಬಾಸ್ಟಾ ಕಾಫಿ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದರು.
2 ಲಕ್ಷ ಹೆಕ್ಟೆರ್‌ನಲ್ಲಿ ಕಾಫಿ ಬೆಳೆ:ಭಾರತದಲ್ಲಿ ಬೆಳೆಯುವ ಕಾಫಿಗೆ ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಯೂರೋಪ್‌ನಲ್ಲಿ ಹೆಚ್ಚಿನ ಬೇಡಿಕೆಯಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನ್ನು ಕಾಫಿ ಬೆಳೆಯಲು ಅವಕಾಶವಿಲ್ಲ. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮಿತಿಯ ಗರಿಷ್ಠ ಪ್ರಮಾಣ ಕಾಫಿ ಬೆಳೆಯಲಾಗಿದೆ. ಒಡಿಶಾ, ಆಂಧ್ರಪ್ರದೇಶ ಹಾಗೂ ದೇಶದ ವಾಯವ್ಯ ಭಾಗಗಳಲ್ಲಿ 2 ಲಕ್ಷ ಹೆಕ್ಟೆರ್ ಜಾಗವನ್ನು ಇಸ್ರೋ ಜೊತೆಗೆ ಸೇರಿ ಸ್ಯಾಟ್ಲೈಟ್ನಿಂದ ಗುರುತಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಆ ಭಾಗದಲ್ಲಿ ಕಾಫಿ ಬೆಳೆಯಲು ಚಿಂತಿಸಲಾಗಿದೆ. ಆದರೆ, ಈ ಭಾಗಗಳು ಕಾಫಿ ಬೆಳೆಯಲು ಕರ್ನಾಟಕದಷ್ಟು ಸೂಕ್ತ ಜಾಗವಲ್ಲ. ಅಲ್ಲಿರುವ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಕಾಫಿಯಿಂದ ಆರ್ಥಿಕತೆ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ. ಕೊಲಂಬಿಯನ್ ಹೊರತುಪಡಿಸಿ ಭಾರತೀಯ ರೊಭಾಸ್ಟಾ ಕಾಫಿಗೆ ಹೆಚ್ಚಿನ ಮಾರುಕಟ್ಟೆ ಇದೆ. ಸಮಾವೇಶದ ಜತೆಗೆ ಭಾರತವೂ ಸೇರಿ ವಿವಿಧ ದೇಶಗಳ ಕಾಫಿ ಕಂಪನಿಗಳು, ಯಂತ್ರೋಪಕರಣ ಕಂಪೆನಿಗಳು ತಮ್ಮ ಮಳಿಗೆಗಳನ್ನು ಪ್ರಾರಂಭಿಸಿದ್ದು, ವ್ಯವಹಾರಿಕ ಮಾತುಕತೆಗಳು ಫಲಪ್ರದವಾಗಿ ನಡೆದಿವೆ ಎಂದು ಜಗದೀಶ್ ವಿವರಣೆ ನೀಡಿದರು.