ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 3 ದಿನಗಳ ಕಾಲ ಟೆಂಪಲ್ ರನ್ ಮಾಡಲಿದ್ದಾರೆ. ಈ ಅವಧಿಯಲ್ಲಿ ಮೈಸೂರಿನಿಂದ ದಾವಣಗೆರೆ ಮತ್ತು ಶಿಕಾರಿಪುರದಿಂದ ಬೆಂಗಳೂರಿಗೆ ಮಾತ್ರ ಹೆಲಿಕಾಪ್ಟರ್ ಬಳಕೆ ಮಾಡಲಿದ್ದು, ಉಳಿದ ಕಡೆ ರಸ್ತೆಯ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಮುಖ್ಯಮಂತ್ರಿಗಳ ಮೂರು ದಿನಗಳ ಪ್ರವಾಸ ಸೆಪ್ಟಂಬರ್ 28ರಂದು ಬೆಳಗ್ಗೆ 10.30ಕ್ಕೆ ಡಾಲರ್ಸ್ ಕಾಲೋನಿ ನಿವಾಸದಿಂದ ಹೊರಡಲಿರುವ ಸಿಎಂ, ಮಧ್ಯಾಹ್ನ 1ಗಂಟೆಗೆ ತಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿಗೆ ತೆರಳಲಿದ್ದಾರೆ. ಅಲ್ಲಿ ಹೊನ್ನಾಂಭಿಕೆ ದೇವಸ್ಥಾನಕ್ಕೆ ಭೇಟಿ ನೀಡಿ, 2 ಗಂಟೆಗೆ ಹೊನ್ನವಳ್ಳಿಯಿಂದ ತೆರಳಿ 3 ಗಂಟೆಗೆ ಯಡಿಯೂರು ತಲುಪಲಿದ್ದಾರೆ. ನಂತರ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸಂಜೆ 4.30ಕ್ಕೆ ಯಡಿಯೂರಿನಿಂದ ರಸ್ತೆ ಮಾರ್ಗವಾಗಿ ಮೈಸೂರಿಗೆ ತೆರಳಲಿದ್ದು, ಸಂಜೆ 6.30ಕ್ಕೆ ಈ ಬಾರಿಯ ದಸರಾ ಉದ್ಘಾಟಕರಾದ ಡಾ.ಎಸ್.ಎಲ್. ಭೈರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಲಿದ್ದಾರೆ. ಮೈಸೂರಿನಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
ಸೆಪ್ಟಂಬರ್ 29ರಂದು ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನದ ಜತೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮೈಸೂರು ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಜೆ 6ಕ್ಕೆ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಲಿದ್ದಾರೆ. ದಾವಣಗೆರೆಯಲ್ಲಿ ರಂಭಾಪುರಿ ಜಗದ್ಗುರುಗಳ 28ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸಿ, ರಾತ್ರಿ ರಸ್ತೆ ಮೂಲಕ ಸ್ವಕ್ಷೇತ್ರ ಶಿಕಾರಿಪುರಕ್ಕೆ ತೆರಳಲಿದ್ದಾರೆ.
ಸೆಪ್ಟಂಬರ್ 30ರಂದು ಬೆಳಗ್ಗೆ ಶಿಕಾರಿಪುರದ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಧ್ಯಾಹ್ನ 3 ಗಂಟೆಗೆ ರಸ್ತೆ ಮೂಲಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದು ಸಂಜೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗು ಶಂಕುಸ್ಥಾಪನೆ ಸಮಾರಂಭದಲ್ಲಿ ನೆರವೇರಿಸಿ, ರಾತ್ರಿ ಶಿಕಾರಿಪುರಕ್ಕೆ ಹಿಂದಿರುಗಲಿದ್ದಾರೆ.
ಅಕ್ಟೋಬರ್ 1ರ ಮಂಗಳವಾರ ಬೆಳಗ್ಗೆ ಶಿಕಾರಿಪುರದ ತಮ್ಮ ನಿವಾಸದ ಬಳಿ ಇರುವ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.