ಬೆಂಗಳೂರು: ಲೈಂಗಿಕ ದಾಹ ತೀರಿಸಿಕೊಳ್ಳಲು ಯುವತಿಯರನ್ನು ಕರೆ ತರುವಂತೆ ಪೀಡಿಸುತ್ತಿದ್ದ ಯುವಕನನ್ನು ಗೆಳೆಯರೇ ಕೊಂದು ರೈಲು ಹಳಿ ಮೇಲೆ ಬಿಸಾಕಿ ಹೋಗಿದ್ದಾರೆ. ಘಟನೆ ಸಬಂಧ ಮೂವರು ಆರೋಪಿಗಳನ್ನು ಬೆಂಗಳೂರು ನಗರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಪಾದರಾಯನಪುರ ನಿವಾಸಿಗಳಾದ ಮಹಮ್ಮದ್ ಸಿದ್ಧಿಕ್ (26) ಮುಬಾರಕ್ ಪಾಶಾ (21) ಹಾಗೂ ಖಲೀಲ್ ಅಹಮದ್(23) ಬಂಧಿತರು. ಮೊಹಮ್ಮದ್ ಅಪ್ರೋಜ್ ಮೃತಪಟ್ಟವ.
ಜನವರಿ 6ರಂದು ಮೊಹಮ್ಮದ್ ಅಪ್ರೋಜ್ ಶವ ನಾಯಂಡಹಳ್ಳಿ-ಮೆಜೆಸ್ಟಿಕ್ ನಡುವಿನ ರೈಲ್ವೇ ಮಾರ್ಗದಲ್ಲಿ ಪತ್ತೆಯಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಡೌಡಾಯಿಸಿ ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಅರಿತ ರೈಲ್ವೇ ಪೊಲೀಸರು ಇದಕ್ಕೆ ಪೂರಕವಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಲವಾದ ಆಯುಧದಿಂದ ಹೊಡೆದು ಹತ್ಯೆಗೈಯಲಾಗಿದೆ ಎಂಬ ವರದಿ ಬಂದಿತ್ತು.