ಬೆಂಗಳೂರು : ಆಂಧ್ರಪ್ರದೇಶ ಮೂಲದ ಕುಖ್ಯಾತ ರೌಡಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಆಶೋಕ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಗಳ ಒಳಗಾಗಿ ವೈಟ್ ಫೀಲ್ಡ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್ ರೆಡ್ಡಿ ಮೇಲೆ ಎಂಟು ಸುತ್ತು ಗುಂಡು ಹಾರಿಸಲಾಗಿದೆ. ಈ ಸಂಬಂಧ ಬಯ್ಯಾರೆಡ್ಡಿ ಗುಂಪಿನ ಸದಸ್ಯರಾದ ಮನೋಜ್ ಕುಮಾರ್ (24), ಜಯಪ್ರಕಾಶ್ (22), ಪ್ರವೀಣ್ (23) ಎಂಬವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.
ಪ್ರಕರಣ ಹಿನ್ನೆಲೆ : ಕೆ.ಆರ್.ಪುರ ಸಮೀಪದ ಕುರುಸೊನ್ನೇನಹಳ್ಳಿಗೆ ಕಳೆದ ಡಿ.8ರ ಮಧ್ಯಾಹ್ನ 3 ಗಂಟೆಗೆ ತನ್ನ ಅಪಾರ್ಟ್ಮೆಂಟ್ ವೀಕ್ಷಣೆಗೆ ಬಂದಿದ್ದ ಶಿವಶಂಕರ್ ರೆಡ್ಡಿ ಹಾಗೂ ಅವರ ಕಾರು ಚಾಲಕನ ಮೇಲೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಿದ್ದರು. ಡಿಸಿಪಿ ಗಿರೀಶ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು, ಶಿವಶಂಕರ್ ರೆಡ್ಡಿ ಹಾಗೂ ಅವರ ಕಾರು ಚಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಪ್ರಾಣಾಪಾಯದಿ೦ದ ಪಾರಾಗಿದ್ದಾರೆ.