ಬೆಂಗಳೂರು:10 ವರ್ಷದ ಬಾಲಕನನ್ನು ಅಪಹರಿಸಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟು ಬಳಿಕ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ರಾಯ್ಪುರದಲ್ಲಿ ಬಂಧಿಸಲಾಗಿದೆ.
ಹೆಬ್ಬಗೋಡಿ ಬಳಿಯ ಶಿಕಾರಿಪಾಳ್ಯದ ವಾಸಿ ಮಹಮದ್ ಅಬ್ಬಾಸ್ ಅವರ 5ನೇ ಪುತ್ರ ಆಸೀಫ್ ಆಲಂ (10) ಎಂಬಾತನನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಗಾರೆ ಕೆಲಸ ಮಾಡುತ್ತಿದ್ದ ಅಬ್ಬಾಸ್ ಅವರ ಪುತ್ರ 5ನೇ ತರಗತಿ ಓದುತ್ತಿದ್ದ. ಬಾಲಕನನ್ನು ಅಪಹರಿಸಿದ್ದ ಕಿರಾತಕರು ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಬಳಿಕ ಘಟನೆ ಸಂಬಂಧ ತಂದೆ ಅಬ್ಬಾಸ್ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದರು.
ಕೊಲೆ ಮಾಡಿ ಛತ್ತೀಸ್ಗಢಕ್ಕೆ ಪರಾರಿ:
ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಅಪಹರಣಕಾರರು ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಮಾಡಿ ಛತ್ತೀಸ್ಗಢಕ್ಕೆ ಪರಾರಿಯಾಗಿದ್ದರು. ಪೊಲೀಸರು ಪ್ರಕರಣ ಬೆನ್ನತ್ತಿದಾಗ ಆರೋಪಿಗಳು ಛತ್ತೀಸ್ಗಢದಲ್ಲಿ ತಲೆಮರೆಸಿಕೊಂಡಿವುದನ್ನು ಖಾತ್ರಿ ಪಡಿಸಿಕೊಂಡಿದ್ದರು. ಅಲ್ಲಿನ ಪೊಲೀಸರ ನೆರವಿನಿಂದ ಆರೋಪಿಗಳಾದ ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ನೌಶಾದ್ ಎಂಬುವರನ್ನು ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರು ಪೊಲೀಸರು ಹಸ್ತಾಂತರಿಸಲು ತಯಾರಿ:
ಆರೋಪಿಗಳ ಮೊಬೈಲ್ ಕರೆ ವಿವರಗಳನ್ನು ಪಡೆದ ನಂತರ ಬೆಂಗಳೂರು ಪೊಲೀಸರು ರಾಯಪುರ ಎಸ್‌ಎಸ್‌ಪಿಯನ್ನು ಸಂಪರ್ಕಿಸಿದ್ದರು. ಬಳಿಕ ರಾಯಪುರ ಎಸ್‌ಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ರಾಯ್ಪುರದ ಟಿಕ್ರಪರಾದಲ್ಲಿ ಮೂವರನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಬೆಂಗಳೂರು ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.