ಬೆಂಗಳೂರು : ಸಾಲದ ಸುಳಿ, ಮೋಜಿನ ಜೀವನಕ್ಕಾಗಿ ಇಲ್ಲಿನ ಮಣಪ್ಪುರಂ ಪೈನಾನ್ಸ್ ಕಂಪನಿ ದೋಚಲು ವಿಫಲ ಯತ್ನ ನಡೆಸಿದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾಮನಗರ ಮೂಲದ ನಾಗರಾಜ್, ನೇಪಾಳ ಮೂಲದ ಬಾಬು ರಾಜಾ ಸಿಂಗ್ ಹಾಗೂ ತುಮಕೂರು ಮೂಲದ ಕುಮಾರ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ರಾಜಗೋಪಾಲ ನಗರದಲ್ಲಿನ ಮಣಪ್ಪುರಂ ಫೈನಾನ್ಸ್ ಕಂಪನಿಗೆ ಕನ್ನ ಹಾಕಲು ಯತ್ನಿಸಿದ ನೈಟಿ ಗ್ಯಾಂಗ್ ಬಂಧನ ಖಾಸಗಿ ಬಸ್ ಚಾಲಕನಾಗಿದ್ದ ನಾಗರಾಜ್ ಹಾಗೂ ಆಟೋ ಚಾಲಕನಾಗಿದ್ದ ಕುಮಾರ್, ಸಾಲದ ಸುಳಿಯಿಂದ ಹೊರಬರಲು ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಮೋಜಿನ ಜೀವನಕ್ಕೆ ದಾಸನಾಗಿದ್ದ ಬಾಬು ರಾಜಾ ಸಿಂಗ್ ಇವರ ಜೊತೆಗೂಡಿ ಈ ಕೃತ್ಯಕ್ಕೆ ಕೈ ಹಾಕಿದ್ದರು.
ಮೇ 26ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನೈಟಿ ಧರಿಸಿ ರಾಜಗೋಪಾಲನಗರದ ಮಣಪ್ಪುರಂ ಪೈನಾನ್ಸ್ ಶಾಖೆಗೆ ನುಗ್ಗಿದ್ದ ಆರೋಪಿಗಳು ಗ್ಯಾಸ್ ಕಟರ್ ಬಳಸಿ ರೋಲಿಂಗ್ ಶಟರ್ ಅನ್ನು ಕತ್ತರಿಸಿದ್ದರು. ಬಳಿಕ ಸಿಸಿ ಕ್ಯಾಮೆರಾ ಆಫ್ ಮಾಡಿ ಲಾಕರ್ ಕತ್ತರಿಸುವ ಯತ್ನದಲ್ಲಿದ್ದಾಗ ಸೆಕ್ಯುರಿಟಿ ಸೈರನ್ ಕೂಗಿದ್ದರಿಂದ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದರು.
ಫೈನಾನ್ಸ್ ಕಂಪನಿಯವರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ರಾಜಗೋಪಾಲನಗರ ಠಾಣಾ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಸಿಲಿಂಡರ್, ದ್ವಿಚಕ್ರ ವಾಹನ, ಪ್ಯಾಸೆಂಜರ್ ಆಟೋ, ಕಬ್ಬಿಣದ ರಾಡ್ ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಈ ಹಿಂದೆ ಎಟಿಎಂ ಮಶಿನ್ ಕಳ್ಳತನ ಯತ್ನ ಪ್ರಕರಣವಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಓದಿ :ಹಾಸನ ನಗರಸಭೆ ಸದಸ್ಯನ ಕೊಲೆ: ಇಬ್ಬರ ಬಂಧನ