ಬೆಂಗಳೂರು :ಒಂದು ಕೋಟಿ ರೂಪಾಯಿ ಆಸೆಗಾಗಿ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಸೋಗಿನಲ್ಲಿ ವ್ಯಕ್ತಿಯನ್ನು ಅಪಹರಿಸಿ(kidnap) 21 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟುಕೊಂಡು 4.5 ಲಕ್ಷ ರೂಪಾಯಿ ಪಡೆದು ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು(Indiranagar police) ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಡಿಸಿಪಿ ಮಾಹಿತಿ ನೀಡಿರುವುದು.. ನಾಗರಾಜ್ ಎಂಬುವರು ನೀಡಿದ ದೂರಿನ ಮೇರೆಗೆ ಉಪೇಂದ್ರ ಕುಮಾರ್, ಸಮೀರ್ ಹಾಗೂ ನೀಲಮ್ಮ ಬಂಧಿತ ಆರೋಪಿಗಳು. ಕಾಂಗೋದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕೊರೊನಾ ಹಿನ್ನೆಲೆ ಭಾರತಕ್ಕೆ ವಾಪಸ್ ಆಗಿದ್ದರು. ಕೌಟುಂಬಿಕ ಕಾರಣಕ್ಕಾಗಿ 15 ಲಕ್ಷ ರೂಪಾಯಿ ಬ್ಯಾಂಕ್ ಲೋನ್ಗಾಗಿ ಓಡಾಡುತ್ತಿದ್ದರು.
ಈ ವೇಳೆ ಆರೋಪಿ ಉಪೇಂದ್ರನ ಪರಿಚಯವಾಗಿದೆ. ಲೋನ್ಗಾಗಿ ತಿರುಗಾಡುತ್ತಿದ್ದ ನಾಗರಾಜ್ಗೆ ಬ್ಯಾಂಕಿನಲ್ಲಿ ಲೋನ್ ಕೊಡಿಸುವುದಾಗಿ ಭರವಸೆ ನೀಡಿದ್ದ. ಸೂಚಿಸಿದಂತೆ ಎಲ್ಲಾ ದಾಖಲಾತಿಗಳನ್ನ ನೀಡಿ ಪುನಃ ಕಾಂಗೋ ದೇಶಕ್ಕೆ ಹೋಗಿದ್ದರು.
ನಾಗರಾಜ್ ನೀಡಿದ ದಾಖಲಾತಿಗಳನ್ನು ಪಡೆದು ಕೊಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್ ನನ್ನ ಸಂಪರ್ಕಿಸಿದಾಗ ನಾಗರಾಜ್ ಅವರ ಪ್ರೊಫೈಲ್ ನೋಡಿ 1.20 ಕೋಟಿ ರೂ.ವರೆಗೂ ಸಾಲ ಪಡೆಯಲು ಅರ್ಹರಿದ್ದಾರೆ ಎಂದು ಆರೋಪಿಗೆ ಹೇಳಿದ್ದರು. ಕಾರ್ ಲೋನ್ಗಾಗಿ ಪಡೆದಿದ್ದ 5 ಲಕ್ಷ ರೂಪಾಯಿ ಸಾಲ ತೀರಿಸಿದರೆ ಮತ್ತೆ ಲೋನ್ ಮಂಜೂರು ಮಾಡಬಹುದು ಎಂದು ಷರತ್ತು ವಿಧಿಸಿದ್ದರು.
1 ಕೋಟಿ ರೂ. ಆಸೆಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಉಪೇಂದ್ರ ಸಾಲದ ಅರ್ಜಿ ನೀಡಿ ಪರಿಚಿತೆಯಾಗಿದ್ದ ನೀಲಮ್ಮನನ್ನ ಸಂಪರ್ಕಿಸಿ ಪುಸಲಾಯಿಸಿ 5 ಲಕ್ಷ ಪಡೆದು ನಾಗರಾಜ್ ತೆಗೆದುಕೊಂಡಿದ್ದ ಸಾಲವನ್ನು ತೀರಿಸಿದ್ದ. ಈ ವಿಷಯವನ್ನು ನಾಗರಾಜ್ಗೂ ತಿಳಿಸಿದ್ದ. 1 ಕೋಟಿ ರೂ.ಸಾಲಕ್ಕೆ ಬೇಕಾದ ಎಲ್ಲಾ ದಾಖಲಾತಿ ಸಲ್ಲಿಸಿದ್ದ.
ಕೆಲ ದಿನಗಳ ಬಳಿಕ ತಾಯ್ನಾಡಿಗೆ ನಾಗರಾಜ್ ಬಂದಿದ್ದರು. ಸಾಲ ಮಂಜೂರಾತಿಗಾಗಿ ಅರ್ಜಿಗಾಗಿ ಸಹಿ ಹಾಕುವಾಗ 1 ಕೋಟಿ ರೂ.ಸಾಲಕ್ಕೆ ಈಗಾಗಲೇ ಅರ್ಜಿ ಹಾಕಿರುವ ವಿಚಾರ ಗೊತ್ತಾಗಿದೆ. ಇದರಿಂದ ಆಶ್ಚರ್ಯಕ್ಕೊಳಗಾಗಿ ಉಪೇಂದ್ರ ಬಳಿ ವಿಚಾರಿಸಿದ್ದಾರೆ. ಐದು ಲಕ್ಷ ತೀರಿಸಿದ್ದೇನೆ. ಹೀಗಾಗಿ ನೀನು 1 ಕೋಟಿ ರೂ.ಸಾಲ ತೆಗೆದುಕೊ ಎಂದು ನಾಗರಾಜ್ಗೆ ಸೂಚಿಸಿದ್ದ.
ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ತೀರಿಸಿರುವ 5 ಲಕ್ಷ ಜೊತೆಗೆ ಇನ್ನೂ 2 ಲಕ್ಷ ರೂಪಾಯಿ ಕೊಡುವಂತೆ ತಾಕೀತು ಮಾಡಿದ್ದಾನೆ. ಇದಕ್ಕೆ ನಾಗರಾಜ್ ಒಲ್ಲೆ ಎಂದಿದ್ದರು.
ಪೊಲೀಸ್ ಸೋಗಿನಲ್ಲಿ ವ್ಯಕ್ತಿಯ ಕಿಡ್ನ್ಯಾಪ್ ಕಿಡ್ನ್ಯಾಪ್ಗಾಗಿ ಸುಪಾರಿ ನೀಡಿದ ಉಪೇಂದ್ರ :ಅಂದುಕೊಂಡಷ್ಟು ಸುಲಭವಾಗಿ ಹಣ ಸಿಗದಿರುವುದನ್ನು ಖಾತ್ರಿಯಾಗುತ್ತಿದ್ದಂತೆ ಸಮೀರ್ ಎಂಬಾತನಿಗೆ ನಾಗರಾಜ್ ನನ್ನು ಕಿಡ್ನ್ಯಾಪ್ ಮಾಡಲು ಉಪೇಂದ್ರ ಸುಪಾರಿ ನೀಡಿದ್ದ. ಕಳೆದ ಆ.9ರಂದು ಇಂದಿರಾನಗರ ಕೆಎಫ್ಸಿ ಸಿಗ್ನಲ್ ಬಳಿ ಸಿಸಿಬಿ ಇನ್ಸ್ಪೆಕ್ಟರ್ ಸೋಗಿನಲ್ಲಿ ನಾಗರಾಜ್ನನ್ನು ಪರಿಚಯಿಸಿಕೊಂಡು ವಿಚಾರಣೆ ನಡೆಸಬೇಕೆಂದು ಹೇಳಿ ಕಾರು ಹತ್ತಿಸಿಕೊಂಡಿದ್ದಾನೆ. ಮಾರ್ಗ ಮಧ್ಯೆ ಆರೋಪಿ ಉಪೇಂದ್ರ ಸಹ ಕಾರು ಹತ್ತಿದಾಗ ತಾನು ಕಿಡ್ನ್ಯಾಪ್ ಆಗಿರುವುದಾಗಿ ವಿಚಾರ ನಾಗರಾಜ್ ಗೊತ್ತಾಗಿದೆ.
ನಂತರ 20 ದಿನಗಳ ಅಕ್ರಮ ಬಂಧನದಲ್ಲಿಸಿ ನಿರಂತರವಾಗಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾರೆ.ಜೊತೆಗೆ 15 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ.ಬ್ಯಾಂಕಿನಿಂದ 4.5 ಲಕ್ಷ ರೂಪಾಯಿ ಹಣ ಪಡೆದುಕೊಂಡು ಖಾಲಿ ಚೆಕ್ ಹಾಗೂ ಬಾಂಡ್ ಪೇಪರ್ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ.
ನಡೆದಿರುವ ವಿಷಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿ ಕಳುಹಿಸಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.