ಬೆಂಗಳೂರು:ಸಿಗರೇಟ್ ಹಣ ಕೇಳಿದ್ದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.90 ಲಕ್ಷ ರೂ. ಎಗರಿಸಿ, ಪ್ರಾಣ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಡೆಲಿವರಿ ಬಾಯ್ ಕಾರ್ತಿಕ್(20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್(20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್(23) ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಸಿಗರೇಟ್ ಹಣ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿ ಹಲ್ಲೆ ಉಡುಪಿಯ ಬೈಂದೂರು ಮೂಲದ ನವೀನ್ ಕುಮಾರ್ ಹಾಗೂ ಪ್ರಜ್ವಲ್ ಶೆಟ್ಟಿ, ನಿತೀನ್ ಶೆಟ್ಟಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿ.9ರಾತ್ರಿ 11.30 ರ ಸಮಯದಲ್ಲಿ ಏಳೆಂಟು ಜನರ ರೌಡಿಗಳ ಗುಂಪು ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಗೆ ಟೀ ಕುಡಿಯಲು ಮತ್ತು ಸಿಗರೇಟ್ ಸೇದಲು ಹೋಗಿದ್ದಾರೆ.
ಬೇಕರಿಯವರು ಸಿಗರೇಟ್ ನೀಡಿ ಹಣ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಪುಡಿ ರೌಡಿಗಳು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿ ಹಣ ತೆಗೆದುಕೊಂಡು ಪರಾರಿಯಾಗಿದ್ದರು. ಹಲ್ಲೆಗೊಳಗಾದವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?:ಗುರುವಾರ ರಾತ್ರಿ 11:30 ರ ಸಮಯದಲ್ಲಿ 7-8 ಅಪರಿಚಿತರು ಟೀ ಕೇಳಿದ್ದು, ಅವರಿಗೆ ಕುಡಿಯಲು ಟೀ ಕೊಟ್ಟ ನಂತರ ಹಣ ಕೊಡುವ ವಿಷಯದಲ್ಲಿ ತಗಾದೆ ತೆಗೆದು ಏಕಾಏಕಿ ಇಬ್ಬರೂ ಅಪರಿಚಿತರು ಅಂಗಡಿ ಒಳಗೆ ಬಂದು ಮನಬಂದಂತೆ ಹೆಲ್ಮೆಟ್ ಹಾಗೂ ಕೈಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಪ್ರಜ್ವಲ್‌ಶೆಟ್ಟಿ, ನಿತೀನ್ ಶೆಟ್ಟಿ ಅವರ ಮೇಲೆಯೂ ಹಲ್ಲೆ ನಡೆಸಿ ಕಾಲಿನಿಂದ ತುಳಿದಿದ್ದಾರೆ.
ಅಲ್ಲದೇ ಈ ಸಂದರ್ಭದಲ್ಲಿ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ 25 ಸಾವಿರ ರೂ. ಬೆಲೆ ಬಾಳುವ ಚೈನ್ ತೆಗೆದುಕೊಂಡು ಹೋಗಿದ್ದಾರೆ. ಕಾಂಡಿಮೆಂಟ್ಸ್ ವಸ್ತುಗಳನ್ನು ಹಾಗೂ ಗ್ಲಾಸ್‌ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿ, ಕ್ಯಾಷ್ ಬಾಕ್ಸ್‌ನಲ್ಲಿ 1.90 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದಾರೆ.
ಹೋಗುವಾಗ ಪೊಲೀಸ್‌ಗೆ ಏನಾದರೂ ದೂರು ನೀಡಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ. ನಿಮ್ಮನ್ನು ಕೊಲೆ ಮಾಡುತ್ತೇವೆ. ತಕ್ಷಣ ಊರು ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಹಲ್ಲೆಗೊಳಗಾದ ನವೀನ್ ಕುಮಾರ್ ಎಚ್‌ಎಎಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಟೈರ್ ಸ್ಫೋಟಿಸಿ ಮತ್ತೊಂದು ವಾಹನಕ್ಕೆ ಕಾರು ಡಿಕ್ಕಿ: ನಾಲ್ವರು ವಿದ್ಯಾರ್ಥಿಗಳ ದುರ್ಮರಣ