ಬೆಂಗಳೂರು: ಸ್ಥಳೀಯರ ಹೆಸರಿನಲ್ಲಿ ನಕಲಿ ಸಿಮ್‌ಕಾರ್ಡ್, ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಸೈಬರ್ ಅಪರಾಧ ಕೃತ್ಯಗಳಲ್ಲಿ ಸಕ್ರಿಯರಾಗಿದ್ದ ಇಬ್ಬರು ಆಫ್ರಿಕನ್ ಮೂಲದ ಆರೋಪಿಗಳ ಸಹಿತ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆಫ್ರಿಕಾ ಮೂಲದ ಫಾಸೋಯಿನ್ ಅವಲೋಹೋ ಅಡೆಯಿಂಕಾ (32), ಅಡ್ಜೆ ಅಂಗೇ ಆಲ್ಫ್ರೆಡ್ ಅಡೋನಿ (23) ಹಾಗೂ ತ್ರಿಪುರಾ ಮೂಲದ ಮೋನಿಕುಮಾರ್ ಕಾಯ್ ಪೆಂಗ್ (23) ಬಂಧಿತ ಆರೋಪಿಗಳಾಗಿದ್ದಾರೆ.
ತ್ರಿಪುರಾದಲ್ಲಿ ಬುಡಕಟ್ಟು ಜನಾಂಗದವರಿಗೆ ಹಣದ ಆಸೆ ತೋರಿಸಿ ಅವರ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಸಿ ಮತ್ತು ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುತ್ತಿದ್ದ ಮೋನಿಕುಮಾರ್ ಅವುಗಳನ್ನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಆಫ್ರಿಕಾ ಮೂಲದ ಆರೋಪಿಗಳಿಗೆ ಪಾರ್ಸಲ್ ಮೂಲಕ ಮಾರಾಟ ಮಾಡಿ ಹಣ ಗಳಿಸುತ್ತಿದ್ದ.
ನಕಲಿ ಸಿಮ್ ಕಾರ್ಡ್ಸ್, ನಕಲಿ ಬ್ಯಾಂಕ್ ಖಾತೆಗಳನ್ನೇ ಬಂಡವಾಳವಾಗಿಸಿಕೊಳ್ಳುತ್ತಿದ್ದ ಆಫ್ರಿಕಾ ಮೂಲದ ಆರೋಪಿಗಳು ಉದ್ಯೋಗ, ಲೋನ್ ಕೊಡಿಸುವುದಾಗಿ, ಲಾಟರಿ, ಗಿಫ್ಟ್ ಬಂದಿರುವುದಾಗಿ ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳ ವ್ಯಕ್ತಿಗಳಿಗೆ ಕರೆ ಮಾಡಿ ನಕಲಿ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು.
ಇದನ್ನೂ ಓದಿ:ಡೇಟಿಂಗ್ ಆ್ಯಪಲ್ಲಿ ಪರಿಚಯವಾದ ಯುವತಿಗೆ ಮನಸೋತು 6 ಕೋಟಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್..!
ಸದ್ಯ ವಂಚನೆಯ ಜಾಲ ಬಯಲಿಗೆಳಿದಿರುವ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿತ ಮೋನಿಕುಮಾರ್ನಿಂದ 1 ಮೊಬೈಲ್, 2 ಸಿಮ್ ಕಾರ್ಡ್ ಹಾಗೂ ಆಫ್ರಿಕಾ ಮೂಲದ ಆರೋಪಿಗಳಿಂದ 4 ಡೆಬಿಟ್ ಕಾರ್ಡ್ಸ್, 4 ಸಿಮ್ ಕಾರ್ಡ್ಸ್, 3 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಐಟಿ ಹಾಗೂ ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.