ಬೆಂಗಳೂರು:ತಾಂಡಾಗಳು ಸೇರಿದಂತೆ ಎಲ್ಲೆಲ್ಲಿ ವೈನ್ ಶಾಪ್ ಇಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ ತೆರೆಯಲು ಚಿಂತನೆ ನಡೆಸಲಾಗಿದೆ, ಇದರಿಂದ ಆದಾಯ ಬರುತ್ತದೆ ಎಂಬುದು ಸರ್ಕಾರದ ಚಿಂತನೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಅಬಕಾರಿ ಇಲಾಖೆಯ ಮೊದಲ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್. ನಾಗೇಶ್, ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ ನಡೆದಿದೆ. ಕೆಲವೆಡೆ ಮದ್ಯದ ಅಂಗಡಿ ದೂರ ಇದ್ದರೆ ಇನ್ನೂ ಕೆಲವು ಕಡೆ ಮದ್ಯದ ಅಂಗಡಿಯೇ ಇರುವುದಿಲ್ಲ. ಇಂಥಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಇದೆ. ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳೆಯರು, ಸ್ವಾಮೀಜಿಗಳು ಒಳ್ಳೆಯ ದೃಷ್ಟಿಯಿಂದ ಮದ್ಯ ಬೇಡವೆಂದು ಹೇಳಿದ್ದಾರೆ. ಆದರೆ, ರಾಜ್ಯಕ್ಕೆ ಆದಾಯ ಬೇಕು. ಯಾರೋ ಮಹಿಳೆಯರು ಹೇಳಿದ್ರು ಅಂತ ಮದ್ಯ ನಿಷೇಧ ಮಾಡಲಾಗುವುದಿಲ್ಲ ಎಂದರು. ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕೆನ್ನುವುದು ನಮ್ಮ ಉದ್ದೇಶ. 2018-19 ರಲ್ಲಿ 19,750 ಕೋಟಿ.ರೂ ಗುರಿ ನಿಗದಿ ಪಡಿಸಲಾಗಿತ್ತು. ಅದರಂತೆ 19,943.93 ಕೋಟಿ.ರೂ ಗುರಿಯನ್ನು ಸಾಧಿಸಲಾಗಿದೆ. 2019-20 ನೇ ಸಾಲಿನಲ್ಲಿ 20,950 ಕೋಟಿ.ರೂ ನಿಗದಿಪಡಿಸಲಾಗಿದ್ದು, 2019-20ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ 9099.56 ಕೋಟಿ ರೂ.ಗಳ ಗುರಿಯನ್ನು ಸಾಧಿಸಲಾಗಿದೆ ಎಂದು ಹೇಳಿದರು.