ಬೆಂಗಳೂರು: ಕೋವಿಡ್ ಹೊಡೆತಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಬಿಎಂಟಿಸಿ ನಿಗಮ ಇದೀಗ ಪ್ರಯಾಣಿಕರಿಗೆ ಶಾಕ್ ನೀಡಲು ಮುಂದಾಗುತ್ತಿದೆ. ಈಗಾಗಲೇ ನಷ್ಟದ ಸುಳಿಯಲ್ಲಿ ಸಿಲುಕಿರುವ ನಿಗಮ ತನ್ನ ಸಿಬ್ಬಂದಿಗಳಿಗೂ ಪೂರ್ಣ ಪ್ರಮಾಣದ ವೇತನ ನೀಡಲು ಆಗದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಒಂದು ಕಡೆ ಪ್ರಯಾಣಿಕರ ಸಂಖ್ಯೆ ಇಳಿಕೆ, ಇನ್ನೊಂದು ಕಡೆ ತೈಲ ದರ ಏರಿಕೆಯಿಂದ ಇಕ್ಕಟ್ಟಿಗೆ ಸಿಲುಕಿರುವ ನಿಗಮ ಇದೀಗ ಮತ್ತೊಮ್ಮೆ ಟಿಕೆಟ್ ದರ ಏರಿಕೆಗೆ ಚಿಂತನೆ ನಡೆಸಿದೆ.
ಕಳೆದ ವರ್ಷ ಶೇ.18 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ತೀರ್ಮಾನ ಮಾಡಿದ್ದ ಬಿಎಂಟಿಸಿಗೆ ಸರ್ಕಾರ ಕೊಕ್ಕೆ ಹಾಕಿತ್ತು. ಕೋವಿಡ್ ಸಂಕಷ್ಟ ಹಿನ್ನೆಲೆ ದರ ಪರಿಷ್ಕರಣೆ ಮಾಡದಂತೆ ಸೂಚಿಸಿತ್ತು. ಕೆ ಎಸ್ ಆರ್ ಟಿಸಿ, ಎನ್ ಡಬ್ಲೂ ಕೆ ಎಸ್ ಆರ್ ಟಿಸಿ, ಎನ್ ಇ ಕೆ ಎಸ್ ಆರ್ ಟಿ ಸಿಯಲ್ಲಿ ಮಾತ್ರ ದರ ಪರಿಷ್ಕೃರಣೆ ಮಾಡಲಾಗಿತ್ತು. ಇದೀಗ ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದ್ದು, ಶೇ12-15 ರಷ್ಟು ದರ ಹೆಚ್ಚಳಕ್ಕೆ ನಿಗಮ ಮುಂದಾಗಿದೆ. ಕೋವಿಡ್ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಅರ್ಧದಷ್ಟು ಕುಸಿತವಾಗಿದ್ದು, ಗಾಯದ ಮೇಲೆ ಬರೆ ಎನ್ನುವಂತೆ ಡೀಸೆಲ್ ದರ ನಿರಂತರವಾಗಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ದರ ಪರಿಷ್ಕರಣೆಗೆ ಸಂಸ್ಥೆ ಮುಂದಾಗುತ್ತಿದೆ.