ಬೆಂಗಳೂರು: ಮೀಸಲಾತಿ ಸಂಬಂಧ ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ಸಮಾಧಾನ ಸಿಕ್ಕಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ. ವಾಲ್ಮೀಕಿ ಸಮುದಾಯ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಜಾಗೂ ಪ.ಪಂಗಡದ ಸಮುದಾಯಗಳಲ್ಲಿ 151 ಜಾತಿ ಬರುತ್ತವೆ. ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಇದು ಇಂದಿನ ಹೋರಾಟ ಅಲ್ಲ. ಅನೇಕ ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಇಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಸಿಎಂ ಬೊಮ್ಮಾಯಿಗೆ ಪ. ಪಂಗಡ ಹಾಗೂ ಪ. ಜಾತಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸದ್ಯ ಪರಿಶಿಷ್ಟ ಜಾತಿಗಳಿಗೆ 15% ಮೀಸಲಾತಿ ಕೊಡಲಾಗುತ್ತಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಲಾಗುತ್ತಿದೆ. ಈಗ ಅದು 17%ಗೆ ಹೆಚ್ಚಿಗೆ ಮಾಡಲಾಗಿದೆ. ಪ.ಪಂಗಡಕ್ಕೆ 3% ದಿಂದ 7% ಗೆ ಏರಿಕೆ ಮಾಡಲಾಗಿದೆ. ನಮ್ಮ ನಾಯಕರು ನುಡಿದಂತೆ ನಡೆದಿದ್ದಾರೆ. ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ನಾನು ಮಾತು ಕೊಟ್ಟಿದ್ದೆ. ನಮ್ಮ ಸರ್ಕಾರ ಬಂದ ಬಳಿಕ ಮೀಸಲಾತಿ ಮಾಡಿಕೊಡುತ್ತೇವೆ ಎಂದಿದ್ದೆ. ಈ ಬಗ್ಗೆ ಹಲವರು ನನ್ನನ್ನು ಗೇಲಿ ಮಾಡುತ್ತಿದ್ದರು. ರಾಮುಲು ಬರೇ ಮಾತನಾಡುತ್ತಾರೆ. ಅವರಿಂದ ಏನು ಆಗಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದರು. ಇದರಿಂದ ನನಗೆ ಬಹಳ ನೋವಾಗುತ್ತಿತ್ತು. ನಾನು ಇಲಾಖೆ ಮಂತ್ರಿಯಾದ ಬಳಿಕ ನಮ್ಮ ಬಂಧುಗಳು ನನಗೆ ಬಯ್ಯುತ್ತಿದ್ದರು ಎಂದರು.