ಬೆಂಗಳೂರು:ರಾಜ್ಯದಲ್ಲಿ ದಿನೇ ದಿನೆ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಭಾಗವಹಿಸಿದವರು ಹಾಗೂ ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬಂದಂತಹವರು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೊಳಗಾಗುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮನವಿ ಮಾಡಿದ್ದಾರೆ.
ವೈದ್ಯಕೀಯ ತಪಾಸಣೆಗೊಳಗಾಗುವುದನ್ನು ನಿರ್ಲಕ್ಷಿಸಿದಲ್ಲಿ ತಮ್ಮ ಜೀವಕ್ಕೂ ಮತ್ತು ತಮ್ಮ ಬಂಧು ಬಳಗದವರ ಜೀವಕ್ಕೂ ತೊಂದರೆ ಮಾಡಿದಂತಾಗುತ್ತದೆ. ಅಲ್ಲದೆ, ಸಮುದಾಯದ ಸ್ವಾಸ್ಥ್ಯ ಹಾಳುಮಾಡಿದಂತಾಗುತ್ತದೆ. ಹಾಗಾಗಿ, ಎಲ್ಲಾ ಮಹನೀಯರು ಸಹಕರಿಸಲು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.