ಬೆಂಗಳೂರು:ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ಕಠಿಣ ಲಾಕ್ಡೌನ್ ಹೇರಿರುವ ಕಾರಣ ಬೇಕಾಬಿಟ್ಟಿ ವಾಹನದಲ್ಲಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಜಪ್ತಿಯಾಗುವುದು ಗ್ಯಾರಂಟಿ. ಈ ಹಿಂದೆ ಲಾಕ್ಡೌನ್ ಇದ್ದಾಗ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಕೆಲವೊಂದು ವಿಚಾರಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಪ್ರಮುಖವಾಗಿ ನಾಳೆ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗುತ್ತೆ. ಯಾವುದೇ ವಾಹನ ಸವಾರರು ಬಂದರೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಒಂದು ವೇಳೆ ವಿನಾ ಕಾರಣ ಓಡಾಟ ಮಾಡುವುದು ಕಂಡು ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ( ಎನ್.ಡಿ.ಎಂ.ಎ.) ಪ್ರಕರಣ ದಾಖಲಿಸಿಕೊಂಡು ವಾಹನ ಜಪ್ತಿ ಮಾಡಲಿದ್ದಾರೆ. ಈ ಹಿಂದೆ ಕೂಡ ಲಕ್ಷಾಂತರ ವಾಹನಗಳನ್ನ ಪೊಲೀಸರು ಜಪ್ತಿ ಮಾಡಿ ತದ ನಂತರ ನ್ಯಾಯಾಲಯದ ಅನುಮತಿ ಮೇರೆಗೆ ದಂಡ ವಿಧಿಸಿ ಮಾಲೀಕರಿಗೆ ಹಸ್ತಾಂತರ ಮಾಡಿದ್ದರು.