ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ಮೂರನೇ ಹಂತಕ್ಕೆ ಹೋಗಿದೆ ಎಂದು ಈಗಲೇ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಿಲ್ಲವೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮೈಸೂರಿನ ಟ್ರಾವೆಲ್ ಹಿಸ್ಟರಿ ಇಲ್ಲದಿರುವ ವ್ಯಕ್ತಿಗೆ ಪಾಸಿಟಿವ್ ಬಂದಿರುವ ಪ್ರಕರಣವಾಗಿ ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ತಕ್ಷಣಕ್ಕೆ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಿಲ್ಲ. ಸಂಪೂರ್ಣ ವಿವರ ಪಡೆದು ಮಾಹಿತಿ ನೀಡುತ್ತೇವೆ. ಪ್ರಾಥಮಿಕ ವರದಿ ಪ್ರಕಾರ ಅವರು ಆರೋಗ್ಯ ಇಲಾಖೆಯವರ ಜೊತೆಗೆ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಸೋಂಕಿತರ ಜತೆ ಸಂಪರ್ಕ ಇಲ್ಲ ಎಂದು ವಿವರಿಸಿದರು.
ಸಿಎಂ ವಿಡಿಯೋ ಕಾನ್ಫರೆನ್ಸ್ನಲ್ಲಿ ಎಲ್ಲಾ ಜಿಲ್ಲೆಗಳು ಯಾವ ರೀತಿ ಸಜ್ಜಾಗಿದೆ ಎಂಬ ಮಾಹಿತಿ ಕೇಳಿದ್ದಾರೆ. ಅಗತ್ಯ ವ್ಯವಸ್ಥೆ ಆಗದಿದ್ದರೆ ಯಾಕೆ ಆಗಿಲ್ಲ ಎಂಬ ಮಾಹಿತಿ ಕೇಳಲಾಗಿದೆ. ಅಗತ್ಯ ವಸ್ತುಗಳ ಸರಬರಾಜಿಗೆ ತೊಂದರೆ ಆಗದಂತೆ ನೋಡೊಕೊಳ್ಳಲು ತಿಳಿಸಲಾಗಿದೆ. ಅಗತ್ಯ ವಸ್ತು ಮನೆಗಳಿಗೆ ತಲುಪಿಸಲು ಎಲ್ಲಾ ಡಿಸಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ರಾಜ್ಯದ ಗಡಿಗಳನ್ನು ಮುಚ್ಚಲು ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ಎರಡು ಮೂರು ತಿಂಗಳಿಗೆ ಬೇಕಾಗುವಷ್ಟು ಸಲಕರಣೆ ಖರೀದಿಗೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಹೋಟೆಲ್ಗಳಲ್ಲಿ 2000 ಕೊಠಡಿಗಳು ಬಿಬಿಎಂಪಿ ವತಿಯಿಂದ ಸಿದ್ಧವಾಗಿವೆ. ಖಾಸಗಿ ಡಿಸ್ಟಿಲರಿಗಳು ಸ್ಯಾನಿಟೈಸರ್ ಉತ್ಪಾದಿಸಿ ಉಚಿತವಾಗಿ ನೀಡಲು ಒಪ್ಪಿಕೊಂಡಿದ್ದಾರೆ. ಜೀವ ಕಾಪಾಡಿಕೊಳ್ಳಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಿಟ್ಟು ಬೇರೆ ದಾರಿ ಇಲ್ಲ. ರಾಜ್ಯದಲ್ಲಿ 55 ಜನರಿಗೆ ಸೋಂಕು ದೃಢಪಟ್ಟಿದೆ, ಇಬ್ಬರು ಸಾವನ್ನಪ್ಪಿದ್ದಾರೆ. ಈಗಾಗಲೇ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಾರ್ವಜನಿಕರಿಗಾಗಿ ಸಹಾಯವಾಣಿ:ಅಗತ್ಯ ಸೇವೆಗಳಿಗೆ ಮತ್ತು ಕೋವಿಡ್ ಹೊರತಾಗಿ ಬೇರೆ ಸೇವೆಗಳಿಗಾಗಿ, ಸಮಸ್ಯೆಗಳ ಬಗ್ಗೆ ನೆರವು ಕೋರಲು ಟೋಲ್ ಫ್ರೀ ನಂಬರ್ ನೀಡುತ್ತಿದ್ದೇವೆ. ಟೋಲ್ ಫ್ರೀ ನಂ.155214 ಗೆ ಕರೆ ಮಾಡಬಹುದಾಗಿದೆ. ಇಲ್ಲವಾದರೆ ವಾಟ್ಸ್ಯಾಪ್ ನಂ. 9333333684 ಮತ್ತು 9777777684 ನ್ನೂ ಸಂಪರ್ಕಿಸಬಹುದು. ಇಂದು ಮಧ್ಯರಾತ್ರಿಯಿಂದಲೇ ಈ ನಂಬರ್ಗಳು ಕಾರ್ಯಾರಂಭ ಮಾಡಲಿವೆ ಎಂದು ಸಚಿವ ಸುಧಾಕರ್ ತಿಳಿಸಿದರು.