ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಜೈರಾಮ್ ರಮೇಶ್ ಬೆಂಗಳೂರು : ಪ್ರಧಾನಮಂತ್ರಿ ಮೋದಿ ಹೇಳುವ ಮಾದರಿಯಲ್ಲಿ ಡಬಲ್ ಇಂಜಿನ್ ಸರ್ಕಾರದ ಕಾರ್ಯನಿರ್ವಹಣೆ ಕರ್ನಾಟಕದಲ್ಲಿ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ಮೇ 10ರಂದು ರಾಜ್ಯ ಚುನಾವಣೆ ನಡೆಯಲಿದ್ದು, ಇದು ವಿಧಾನಸಭೆ ಚುನಾವಣೆಗಾಗಿ ನಡೆಯುತ್ತಿರುವ ಚುನಾವಣೆಯೇ ಹೊರತು, ಲೋಕಸಭೆ ಚುನಾವಣೆ ಅಲ್ಲ. ಈ ಚುನಾವಣೆ ಸಿಂಗಲ್ ಇಂಜಿನ್ ಚುನಾವಣೆಯೇ ಹೊರತು, ಡಬಲ್ ಇಂಜಿನ್ ಚುನಾವಣೆ ಅಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದು ಯಾರು ಮುಖ್ಯಮಂತ್ರಿ ಆಗಿ ಆಡಳಿತ ನಡೆಸಲಿದ್ದಾರೆ ಎಂಬುದು ಈ ಚುನಾವಣೆಯ ವಿಚಾರ. ಪ್ರಧಾನಮಂತ್ರಿ, ಗೃಹ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎಂದು ಮಾತನಾಡುತ್ತಿದ್ದಾರೆ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದರು.
ಡಬಲ್ ಇಂಜಿನ್ ಸರ್ಕಾರ ಎಂದರೆ ಏನು? ಮೋದಿ ಅವರ ಪ್ರಕಾರ ದೆಹಲಿಯಲ್ಲಿ ನಾನು ಪ್ರಧಾನಮಂತ್ರಿಯಾಗಿದ್ದೇನೆ ರಾಜ್ಯದಲ್ಲಿ ನನ್ನ ಕೈಗೊಂಬೆಯಗಿರುವ ಮುಖ್ಯಮಂತ್ರಿ ಬೇಕು ಎಂದರ್ಥ. ಇದು ನಮ್ಮ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗಳ ಮೇಲಿನ ದಾಳಿಯಾಗಿದೆ. ಈ ಡಬಲ್ ಇಂಜಿನ್ ಸರ್ಕಾರ ಎಂದರೆ ಯಾವ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ಬರುತ್ತದೆಯೋ ಅದು ನಿಜವಾದ ಡಬಲ್ ಇಂಜಿನ್ ಸರ್ಕಾರವಾಗುತ್ತದೆ.
ಮಣಿಪುರ, ಅಸ್ಸೋಂ, ಹಿಮಾಚಲ, ಉತ್ತರಾಖಂಡ, ಜಮ್ಮು ಕಾಶ್ಮೀರ ರಾಜ್ಯಗಳಿಗೆ ಶೇ.90- 95ರಂಷ್ಟು ಆದಾಯ ಕೇಂದ್ರ ಸರ್ಕಾರದಿಂದ ಬರುತ್ತದೆ. ಆದರೆ ಕರ್ನಾಟಕದಲ್ಲಿ ಶೇ.94ರಷ್ಟು ಆದಾಯ ಸ್ವಂತ ಆದಾಯವಾಗಿದೆ. ರಾಜ್ಯದ ತೆರಿಗೆ, ಕೇಂದ್ರ ತೆರಿಗೆಯಲ್ಲಿ ಪಾಲುಗಳು ಪ್ರಧಾನಮಂತ್ರಿಗಳ ಆಶೀರ್ವಾದದಿಂದ ಬರುವಂತಹುದಲ್ಲ. ಇದು ಸಂವಿಧಾನದ ಪ್ರಕಾರ, ಹಣಕಾಸು ಆಯೋಗದ ಪ್ರಕಾರ ಬರುತ್ತದೆ ಎಂದು ಜೈರಾಮ್ ರಮೇಶ್ ತಿಳಿಸಿದರು.
ಬೆಂಗಳೂರು ದೆಹಲಿ ಮೇಲೆ ಅವಲಂಬಿತವಾಗಿಲ್ಲ. ಪ್ರಧಾನಮಂತ್ರಿಗಳು 40% ಕಮಿಷನ್ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಹೀಗಾಗಿ ಅವರು ಡಬಲ್ ಇಂಜಿನ್ ಎಂದು ಮಾತನಾಡುತ್ತಿದ್ದಾರೆ. ನಿಜವಾದ ಡಬಲ್ ಇಂಜಿನ್ ಎಂದರೆ ಒಂದು ಇಂಜಿನ್ ಆರ್ಥಿಕ ವಿಕಾಸಕ್ಕೆ ಇರಬೇಕು. ರೈತರು, ಮಹಿಳೆಯರು, ಯುವಕರಿಗೆ ನೆರವಾಗಬೇಕು. ಎರಡನೇಯದು ಸಾಮಾಜಿಕ ಸದ್ಭಾವನೆ ಇಂಜಿನ್ ಇರಬೇಕು. ಆಗ ನಿಜವಾದ ಡಬಲ್ ಇಂಜಿನ್ ಸರ್ಕಾರವಾಗಲಿದೆ.
ಇದನ್ನು 80 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೇರೆ ಬೇರೆ ರಾಜ್ಯಗಳ ನೀಡುತ್ತಾ ಬಂದಿದೆ. ಭಾರತ ಜೋಡೋ ಯಾತ್ರೆ ಸಮಯದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಸಿಕ್ಕಿದೆ. 23 ದಿನಗಳ ಅವಧಿಯಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ್ದಾರೆ. ಈ ಯಾತ್ರೆ ನಮ್ಮ ಸಂಘಟನೆಗೆ ಉತ್ತೇಜನ ನೀಡಿ ಪಕ್ಷಕ್ಕೆ ಆತ್ಮವಿಶ್ವಾಸ ತುಂಬಿತ್ತು. ಚುನಾವಣೆ ಸಮಯದಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿಯಿತು.
ಅಂದಿನಿಂದ ಇಲ್ಲಿಯವೆರಗೂ ಕಾಂಗ್ರೆಸ್ ಜನರಿಗೆ ಯಾವ ಕಾರ್ಯಕ್ರಮ ನೀಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದೇವೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜಸ್ಥಾನ, ಚತ್ತೀಸಗಡ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕೊಟ್ಟ ಇಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ಮೇ 10ರಂದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 1984ರಲ್ಲಿ ಇಲ್ಲಿನ ಲೋಕಸಭೆ ಚುನಾವಣೆಯಲ್ಲಿ 28 ವಿಧಾನಸಭಾ ಕ್ಷಏತ್ರಗಳ ಪೈಕಿ 27 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು. ನಂತರ 4 ತಿಂಗಳ ನಂತರ ವಿಧಾನಸಭೆ ಚುನಾವಣೆಯಲ್ಲಿ 134 ಕ್ಷೇತ್ರಗಳಲ್ಲಿ ರಾಮಕೃಷ್ಣ ಹೆಗಡೆ ಅವರ ಜನತಾ ದಳಕ್ಕೆ ಅಧಿಕಾರ ಸಿಕ್ಕಿತು. ಮೊದಲ ಬಾರಿಗೆ ರಾಜ್ಯದಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಬೇರೆ ಬೇರೆ ಪಕ್ಷಗಳಿಗೆ ಬಹುಮತ ಸಿಕ್ಕಿತು. ಅದೇ ನಿಜವಾದ ಡಬಲ್ ಇಂಜಿನ್. ನಮ್ಮ ಚುನಾವಣೆ ವ್ಯವಸ್ಥೆಯಲ್ಲಿ ಪಕ್ಷ ಹಾಗೂ ಪಕ್ಷದ ಪ್ರಣಾಳಿಕೆ, ಕಾರ್ಯಕ್ರಮಕ್ಕೆ ಮತ ಹಾಕುತ್ತೇವೆ. ಹೀಗಾಗಿ ನಮಗೆ ಹೆಚ್ಚಿನ ವಿಶ್ವಾಸವಿದೆ. ಈ ಬಾರಿ ಮಲೆನಾಡು, ಕಲ್ಯಾಣ, ಕಿತ್ತೂರು ಕರ್ನಾಟಕ, ಕರಾವಳಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವಿದೆ. ಬೇರೆ ಜಿಲ್ಲೆಗಳಲ್ಲಿ ಬೇರೆ ಪಕ್ಷಗಳಿಂದ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಹೀಗಾಗಿ ನಮ್ಮ ಭಾವನೆ ಸಕಾರಾತ್ಮಕವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.
ಪ್ರಧಾನಿಗಳು, ಗೃಹಸಚಿವರು ಎಷ್ಟಾದರೂ ಚುನಾವಣೆ ಮಾಡಲಿ, ಇದು ಕೇಂದ್ರ ಚುನಾವಣೆಯಲ್ಲ, ರಾಜ್ಯ ಚುನಾವಣೆ. ಈ ರಾಜ್ಯದಲ್ಲಿ ಜನ 40% ಕಮಿಷನ್ ಸರ್ಕಾರದಿಂದ ಮುಕ್ತಿಪಡೆಯಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ತರಲು ಸಂಕಲ್ಪ ಮಾಡಿದ್ದಾರೆ. ನಾನು ರೋಡ್ ಶೋ, ಸಮಾವೇಶ, ಚುನಾವಣಾ ಆಯೋಗಕ್ಕೆ ದೂರು ಎಲ್ಲವನ್ನು ನೋಡಿದರೆ ವರು ವಿಷಯಗಳ ಕೊರತೆ ಎದುರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ ಅವರು, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿಯಿಂದ ಪ್ರಧಾನಮಂತ್ರಿಗಳು, ಗೃಹಸಚಿವರು ಪ್ರಚಾರ ಮಾಡುತ್ತಿದ್ದಾರೆ. ಮೇ 10ರಂದು ಹಸ್ತಕ್ಕೆ ಮತ ಹಾಕಿದರೆ ರಾಜ್ಯಕ್ಕೆ ಹಿತ. ಇದೇ ನಮ್ಮ ಪ್ರಚಾರ ಘೋಷವಾಕ್ಯ. ಇದು ಅತ್ಯಂತ ಮಹತ್ವಪೂರ್ಣ ಚುನಾವಣೆ. ಈ ರಾಜ್ಯದ ನಂತರ ಆರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಿಂದ ನಮ್ಮ ಸಂಘಟನೆಗೆ ಹೆಚ್ಚಿನ ಶಕ್ತಿ ಆತ್ಮವಿಶ್ವಾಸ ಸಿಗಲಿದೆ. 2024ರ ಬಗ್ಗೆ ನಾವು ವಿಚಾರ ಮಾಡುತ್ತಿಲ್ಲ. ನಮ್ಮ ಗಮನ ರಾಜ್ಯಗಳ ಚುನಾವಣೆ ಮೇಲಿದೆ ಎಂಬ ಮಾಹಿತಿಯನ್ನು ಜೈರಾಮ್ ರಮೇಶ್ ನೀಡಿದರು.
ಇದನ್ನೂ ಓದಿ :'ಬಿ.ಸಿ.ಪಾಟೀಲ್ 25 ರಿಂದ 30 ಸಾವಿರ ಮತಗಳಿಂದ ಜಯ ಸಾಧಿಸುತ್ತಾರೆ': ಬಿಎಸ್ವೈ