ಬೆಂಗಳೂರು: ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎನ್ನುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿದ ಬಜೆಟ್ನಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಆಯವ್ಯಯ: ಅನ್ನದಾತರಿಗೆ ಬಿಎಸ್‌ವೈ ಬಂಪರ್ ಗಿಫ್ಟ್
ಗ್ರಾಮ ಮಟ್ಟದಿಂದ ಬೆಂಗಳೂರಿನವರೆಗಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು 2020-21ರ ಮುಂಗಡ ಪತ್ರವನ್ನು ಇಂದು ಸಿಎಂ ಯಡಿಯೂರಪ್ಪನವರು ಮಂಡಿಸಿದ್ದಾರೆ. ಬಹಳ ಮುಖ್ಯವಾಗಿ ಮಹದಾಯಿ ಯೋಜನೆಗೆ 500 ಕೋಟಿ ಮತ್ತು ಇತರೆ ನೀರಾವರಿ ಯೋಜನೆಗಳಿಗೆ ಅತೀ ಹೆಚ್ಚು ಹಣವನ್ನು ಒದಗಿಸಿರುವುದು ನೋಡಿದರೆ ಈ ಸರ್ಕಾರವು ನೀರಾವರಿ ಯೋಜನೆಗೆ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೃಷಿ, ಮೂಲ ಸೌಕರ್ಯ, ಪ್ರವಾಸೋದ್ಯಮ ಮತ್ತು ಬೆಂಗಳೂರು ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದೆ. ಕೈಗಾರಿಕಾ ಹೂಡಿಕೆದಾರರ ಬಹುಮುಖ್ಯ ಬೇಡಿಕೆಯಾದ ಕೈಗಾರಿಕಾ ಸ್ಥಾಪನೆಗೆ ನೇರವಾಗಿ ರೈತರಿಂದ ಜಮೀನು ಖರೀದಿ ಮಾಡಲು ಇದ್ದ ಸಮಸ್ಯೆಗೆ ಪರಿಹಾರವನ್ನು ಮುಂಗಡ ಪತ್ರದಲ್ಲಿ ಪರಿಹರಿಸಿದ್ದಾರೆ. ವಿಶ್ವದ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಹೊಡಿಕೆ ಮಾಡಲು ಸಹಕಾರಿಯಾಗಿದೆ. ಇದರಿಂದ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಅತೀ ಹೆಚ್ಚು ಉದ್ಯೋಗ ನಿರ್ಮಾಣವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಬಜೆಟ್ 20-21: ಜಲಕ್ಷಾಮಕ್ಕೆ ಮುಕ್ತಿ ನೀಡಲು ಬಿಎಸ್‌ವೈ ಬಿಗ್ ಪ್ಲಾನ್
ಮೊಟ್ಟಮೊದಲ ಬಾರಿಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ 6 ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಿ ಹೊಸ ದಿಕ್ಕನ್ನು ನೀಡಿದ್ದಾರೆ ಎಂದು ವಲಯವಾರು ಬಜೆಟ್ ಅನ್ನು ಕಟೀಲ್ ಸಮರ್ಥಿಸಿಕೊಂಡಿದ್ದಾರೆ.