ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು 8ನೇ ಬಾರಿಗೆ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯದ ಮಹಿಳಾ ಉದ್ಯಮಿಗಳು ಹಾಗೂ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸ್ಪಷ್ಟ ದೂರದರ್ಶಿತ್ವ ಮತ್ತು ಮಾರ್ಗದರ್ಶಿಗಳನ್ನು ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ವಿಶ್ವ ಹೂಡಿಕೆದಾರರ ಸಮ್ಮೇಳನ ಆಯೋಜನೆ ಮತ್ತು ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಭೂ ಕಂದಾಯ ಅಧಿನಿಯಮ ತಿದ್ದುಪಡಿಯ ಭರವಸೆ ನೀಡುವ ಮೂಲಕ ರಾಜ್ಯ ಕೈಗಾರಿಕಾಭಿವೃದ್ದಿಗೆ ಸಜ್ಜಾಗಿದೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಸ್ಪಷ್ಟ ಮಾರ್ಗದರ್ಶನವನ್ನು ನೀಡಿದ್ದಾರೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ 4ರ ರಿಯಾಯಿತಿ ಬಡ್ಡಿದರದಲ್ಲಿ 2 ಕೋಟಿವರೆಗಿನ ಸಾಲ ಸೌಲಭ್ಯ. ಸಂಜೀವಿನಿ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ ನೀಡುವ ಘೋಷಣೆ ಮೂಲಕ 60 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯುವ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಮಹಿಳೆಯರ ಸಣ್ಣ ಉದ್ಯಮಗಳಿಗೆ ತಾಂತ್ರಿಕ ನೆರವು, 2,260 ಕಿರು ಉದ್ದಿಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ ಹಾಗೂ ಮಹಿಳೆಯರು ಉದ್ಯೋಗ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿವಿಧ ನಿಯಮಾವಳಿಗಳ ಮರುಪರಿಶೀಲನೆ ಮಾಡುವ ಭರವಸೆಯಿಂದಾಗಿ ಮಹಿಳಾ ಉದ್ಯಮಗಳು ಹೆಚ್ಚಾಗಲಿವೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಬಲ್ಕ್ ಡ್ರಗ್ ಪಾರ್ಕ್, ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ
ಯಾದವಗಿರಿ ಜಿಲ್ಲೆಯ ಕಡೇಚೂರಿನಲ್ಲಿ 1,478 ಕೋಟಿ ವೆಚ್ಚದಲ್ಲಿ ಬಲ್ಕ್ ಡ್ರಗ್ ಪಾರ್ಕ್ ಹಾಗೂ ಮಂಗಳೂರಿನಲ್ಲಿ 66 ಕೋಟಿ ವೆಚ್ಚದಲ್ಲಿ 66 ಕೋಟಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮತ್ತು ಬೀದರ್ನ ಕೃಷಿ ಉಪಕರಣಗಳ ತಯಾರಿಕಾ ಕ್ಲಸ್ಟರ್ನಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದ 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಒತ್ತು ನೀಡಿದೆ ಎಂದರು.