ಕರ್ನಾಟಕ

karnataka

ETV Bharat / state

ಸಮಯ ಪಾಲನೆಯಲ್ಲಿ ವಿಶ್ವದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಎಲ್ಲಿದೆ ಗೊತ್ತಾ?

Most on-time Global Airport: ಕರ್ನಾಟಕದ ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ವಿಶ್ವಗರಿ ಮುಡಿಗೇರಿದೆ. ವಿಶ್ವದಲ್ಲಿಯೇ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

By PTI

Published : Oct 17, 2023, 10:29 PM IST

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು:ವಿಶ್ವದ ಅತ್ಯುಚ್ಚ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಒಂದು. ಇಲ್ಲಿಂದ ದಿನಕ್ಕೆ ಸಾವಿರಾರು ಪ್ರಯಾಣಿಕರು ದೇಶ- ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇಲ್ಲಿನ ಸೌಕರ್ಯ ಮತ್ತು ನಿಲ್ದಾಣದ ಟರ್ಮಿನಲ್​ಗಳು ಹೆಸರುವಾಸಿ. ಅಂತಹ ವಿಮಾನ ನಿಲ್ದಾಣ ಸತತ ಮೂರು ತಿಂಗಳಿನಿಂದ 'ವಿಶ್ವದಲ್ಲಿಯೇ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣ' ಎಂಬ ಖ್ಯಾತಿಗೆ ಪಾತ್ರವಾಗಿದೆ.

ಏವಿಯೇಷನ್​ ಅನಾಲಿಟಿಕ್ಸ್​ ಸಂಸ್ಥೆ ಸಿರಿಯಮ್​ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ಸತತ ಮೂರು ತಿಂಗಳಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ನಿಖರ ಸಮಯವನ್ನು ಕಾಯ್ದುಕೊಂಡಿದ್ದು, ವಿಶ್ವದಲ್ಲಿಯೇ ಅಗ್ರಗಣ್ಯವಾಗಿದೆ ಎಂದು ಅದು ಹೇಳಿದೆ.

ತಿಂಗಳ ಆನ್‌ಟೈಮ್ ಪರ್ಫಾರ್ಮೆನ್ಸ್ ವರದಿಯ ಪ್ರಕಾರ, ವಿಶ್ವದಲ್ಲಿಯೇ ಅತ್ಯಂತ ಸಮಯಪ್ರಜ್ಞೆಯ ವಿಮಾನ ನಿಲ್ದಾಣವಾಗಿ ಕೆಂಪೇಗೌಡ ವಿಮಾನ ನಿಲ್ದಾಣ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಈ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ವಿಮಾನಗಳು ಹೊರಡುವ ಮೂಲಕ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಿದೆ ಎಂದು ಉಲ್ಲೇಖಿಸಲಾಗಿದೆ.

ಸತತ ಮೂರು ತಿಂಗಳು ನಿಖರ ಸೇವೆ:ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಮಾನಗಳು ಹೊರಡುವ ಸಮಯವನ್ನು ಲೆಕ್ಕ ಹಾಕಿ ವರದಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವು ಕರಾರುವಾಕ್​ ಸಮಯವನ್ನು ಪಾಲಿಸಿದೆ. ಜುಲೈ ತಿಂಗಳಿನಲ್ಲಿ ಶೇಕಡಾ 87.51 ಸಮಯಪಾಲನೆ ಮಾಡಲಾಗಿದ್ದರೆ, ಆಗಸ್ಟ್‌ನಲ್ಲಿ ಶೇಕಡಾ 89.66 ರಷ್ಟು ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 88.51 ರಷ್ಟು ನಿಖರತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಬಿಐಎಎಲ್ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ವಿಮಾನ ನಿಲ್ದಾಣವು, 88 ಮಾರ್ಗಗಳು, 35 ಏರ್​ಲೈನ್ಸ್​ಗಳೊಂದಿಗೆ ಪಾಲುದಾರಿಕೆ ಹೊಂದಿದೆ. 2022-23 ರಲ್ಲಿ 31.91 ಮಿಲಿಯನ್​ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದ ದೇಶದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಇದು ಗುರುತಿಸಿಕೊಂಡಿದೆ. ಉಳಿದಂತೆ ಸಮಯಪಾಲನೆ ಮಾಡುವ ನಿಲ್ದಾಣಗಳಲ್ಲಿ ಕೆಐಎ ನಂತರ ಅಮೆರಿಕದ ಉತಾಹ್​ನ ಸಾಲ್ಟ್​ ಲೇಕ್​ ಸಿಟಿ ಅಂತರರಾಷ್ಟ್ರೀಯ ನಿಲ್ದಾಣ, ಹೈದರಾಬಾದ್​ನ ರಾಜೀವ್​ ಗಾಂಧಿ ಅಂತರರಾಷ್ಟ್ರೀಯ ನಿಲ್ದಾಣ, ಅಮೆರಿಕದ ಮಿನ್ನೆಸೋಟದ ಮಿನ್ನಿಯಾಪೊಲೀಸ್​ ಸೇಂಟ್​ ಪಾಲ್​ ಅಂತರರಾಷ್ಟ್ರೀಯ ನಿಲ್ದಾಣ, ಕೊಲಂಬಿಯಾದ ಎಲ್​ ಡೊರಾಡೊ ಅಂತರರಾಷ್ಟ್ರೀಯ ನಿಲ್ದಾಣಗಳು ಕ್ರಮವಾಗಿ ಸ್ಥಾನ ಪಡೆದಿವೆ.

ವರದಿಯ ಮಾನದಂಡವಿದು:ಏವಿಯೇಷನ್​ ಅನಾಲಿಟಿಕ್ಸ್​ ಸಂಸ್ಥೆ ಸಿರಿಯಮ್‌, ಆನ್ ಟೈಮ್ ನಿರ್ಗಮನ ಶ್ರೇಯಾಂಕವನ್ನು ನಿಗದಿತ ಸಮಯಕ್ಕಿಂತ 15 ನಿಮಿಷಗಳ ಒಳಗೆ ನಿರ್ಗಮಿಸಿದ ವಿಮಾನಗಳನ್ನು ಲೆಕ್ಕ ಹಾಕಿ ಶೇಕಡಾವಾರು ಪ್ರಮಾಣವನ್ನು ಅಳೆಯುತ್ತದೆ.

ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ರ ಸೊಬಗನ್ನು ಕಣ್ತುಂಬಿಕೊಳ್ಳಿ

ABOUT THE AUTHOR

...view details