ಕರ್ನಾಟಕ

karnataka

By

Published : May 15, 2021, 2:10 PM IST

ETV Bharat / state

3ನೇ ಅಲೆಗೆ ಮಕ್ಕಳೇ ಟಾರ್ಗೆಟ್: ಮುನ್ನೆಚ್ಚರಿಕೆ ಕುರಿತು ಏಮ್ಸ್​​ನಿಂದ ಮಧ್ಯಂತರ ವರದಿ

ಕೋವಿಡ್​ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಕಂಡು ಬರುವ 4 ಹಂತದ ಲಕ್ಷಣಗಳ ಬಗ್ಗೆ ದೆಹಲಿಯ ಏಮ್ಸ್​ನ ಮಕ್ಕಳ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರು ಮಧ್ಯಂತರ ಮಾಹಿತಿ ನೀಡಿದ್ದಾರೆ.

Bangalore
3ನೇ ಅಲೆಗೆ ಮಕ್ಕಳೇ ಟಾರ್ಗೆಟ್

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೋವಿಡ್-19 ವೈರಸ್ ಯಾವುದೇ ವಯಸ್ಸಿನ ಅಂತರವಿಲ್ಲದೇ ಎಲ್ಲರಿಗೂ ವ್ಯಾಪಿಸಿದೆ.‌ ಹುಟ್ಟಿದ ಕೂಸಿನಿಂದ‌ ಹಿಡಿದು ಇಳಿವಯಸ್ಸಿನವರನ್ನೂ ಕೊರೊನಾ ಬಾಧಿಸಿದೆ. ಕೋವಿಡ್ ಮೊದಲ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಜನರು 2ನೇ ಅಲೆಗೂ ಸಿಲುಕಿದ್ದಾರೆ. ಇದರಿಂದ ಹೊರ ಬರಲಾಗದೇ ಕೊನೆಯ ಅಸ್ತ್ರವಾಗಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ‌ಇತ್ತ ಮಕ್ಕಳಿಗೆ ಸೋಂಕು ಹರಡುವ ಭೀತಿಗೆ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಹೀಗಿರುವಾಗ ಇದೀಗ ಮೂರನೇ ಅಲೆಯ ಭೀತಿಯು ಹೆಚ್ಚಾಗ್ತಿದೆ‌.‌ ಮೊದಲ ಅಲೆಯ ಸಂದರ್ಭದಲ್ಲಿ ಹಿರಿಯರು ಡೇಂಜರ್ ಝೋನ್​​ನಲ್ಲಿದ್ದರೂ, ಎರಡರಲ್ಲಿ ಮಧ್ಯವಯಸ್ಕರು ಹೆಚ್ಚು ತೊಂದರೆಗೆ ಸಿಲುಕಿದ್ದಾರೆ. ಇದೀಗ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾದ್ರೆ ಮಕ್ಕಳಲ್ಲಿ ಕಂಡು ಬರುವ ಕೋವಿಡ್ ಲಕ್ಷಣಗಳು ಏನು? ಮಕ್ಕಳಲ್ಲಿ ರೋಗ ಲಕ್ಷಣಗಳನ್ನ ಗುರುತಿಸೋದು ಹೇಗೆ? ಮಕ್ಕಳನ್ನ ಮನೆಯಲ್ಲಿ ಐಸೋಲೇಷನ್ ‌ಮಾಡುವುದು ಹೇಗೆ? ಮಕ್ಕಳಲ್ಲಿ ಕಂಡು ಬರುವ 4 ಹಂತದ ಲಕ್ಷಣಗಳ ಬಗ್ಗೆ ದೆಹಲಿಯ ಏಮ್ಸ್​ನ ಮಕ್ಕಳ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರು ಮಧ್ಯಂತರ ಮಾಹಿತಿ ನೀಡಿದ್ದಾರೆ.

ಮೂರನೇ ಅಲೆಯಲ್ಲಿ ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು..?

1. ಎ ಸಿಮ್ಟಮ್ಯಾಟಿಕ್ ಪ್ರಕರಣ

  • ಮಕ್ಕಳಲ್ಲಿ ಬಹುತೇಕ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ.
  • ಮೈ ಕೈ ನೋವು ಜ್ವರ, ಸುಸ್ತು ಇರುವುದಿಲ್ಲ.
  • ಹೀಗಾಗಿ, ಮಕ್ಕಳ ಆಕ್ಸಿಜನ್ ಸ್ಯಾಚುರೇಷನ್ ಚೆಕ್ ಮಾಡಿದರೆ ನಾರ್ಮಲ್ ಇರುತ್ತದೆ.
  • ಆದರೆ ದಿನ ನಿತ್ಯ ಸ್ಯಾಚುರೇಷನ್ ಚೆಕ್ ಮಾಡಬೇಕಾಗುತ್ತದೆ.

ಎ ಸಿಮ್ಟಮ್ಯಾಟಿಕ್ ಮಕ್ಕಳಿಗೆ ಚಿಕಿತ್ಸೆ ಏನು?

  • ಮನೆಯಲ್ಲೇ ಮಗುವನ್ನು ಐಸೋಲೇಟ್ ಮಾಡಿ, ಒಬ್ಬರು ಹಿರಿಯರು ಆರೋಗ್ಯ ಕಾಳಜಿ ವಹಿಸಬೇಕು.
  • ಆಕ್ಸಿಜನ್ ಸ್ಯಾಚುರೇಷನ್ ಪರಿಶೀಲಿಸಬೇಕು.
  • ಪ್ಯಾರಾಸಿಟಮಲ್ ಸಿರಪ್ ಮಕ್ಕಳಿಗೆ ಕೊಡುವ ಡೋಸ್​ನಲ್ಲಿ ನೀಡುವುದು.
  • ಉಸಿರಾಟದ ವೇಗವನ್ನ ಪರಿಶೀಲಿಸುತ್ತಿರಬೇಕು.
  • ಸೋಂಕು ಬಂದು 10 ದಿನದ ನಂತರ 3 ದಿನ ಜ್ವರ ಇಲ್ಲದಿದ್ದರೆ ಸೋಂಕು ನಿವಾರಣೆ ಆದಂತೆ.
  • ಆದರೂ ಬೇರೆ ಮಕ್ಕಳ ಜೊತೆ 7 ದಿನ ಬೆರೆಯದಂತೆ ನೋಡಿಕೊಳ್ಳಬೇಕು.

2. ಸಾಧಾರಣ ರೋಗಲಕ್ಷಣಗಳಿರುವ ಮಕ್ಕಳ ಪ್ರಕರಣ

  • ಗಂಟಲು ಕೆರೆತ, ಗಂಟಲು ನೋವು, ಕೆಮ್ಮು.
  • ಮೂಗು ಸೋರುವಿಕೆ, ಜ್ವರ ಇರುವುದು.
  • ಆದರೆ ಉಸಿರಾಟದಲ್ಲಿ ಯಾವುದೇ ವ್ಯತ್ಯಾಸ ಆಗದಿರುವುದು ಸಾಧಾರಣ ಲಕ್ಷಣಗಳಾಗಿವೆ

ಚಿಕಿತ್ಸಾ ವಿಧಾನ ಹೇಗೆ?

  • ಮಕ್ಕಳಿಗೆ ಅಸ್ತಮಾ, ಹೃದಯ, ಕಿಡ್ನಿ ಸಮಸ್ಯೆ, ನರ ದೌರ್ಬಲ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು.
  • ಸಲಹೆ ಪಡೆದು ಮನೆಯಲ್ಲಿ ಅಥವಾ ಆಸ್ಪತ್ರೆಗೆ ದಾಖಲಿಸುವುದು.
  • ಸಾಧಾರಣ ರೋಗ ಲಕ್ಷಣಗಳು ಪ್ರಬಲ ಲಕ್ಷಣಗಳಾಗುತ್ತಿದೆಯಾ ಎಂಬುದನ್ನ ಗಮನಿಸಬೇಕು.

3. ಮಧ್ಯಮ ಗುಣಲಕ್ಷಣಗಳ ಮಕ್ಕಳ ಪ್ರಕರಣ

  • 1 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಉಸಿರಾಟದ ವೇಗ ಒಂದು ನಿಮಿಷಕ್ಕೆ 40 ಬಾರಿಗಿಂತ ಜಾಸ್ತಿ ಇರುವುದು.
  • 5 ವರ್ಷಕ್ಕಿಂತ ಮೇಲ್ಪಟ್ಟವರಿಗೆ 1 ನಿಮಿಷಕ್ಕೆ 30 ಬಾರಿಗಿಂತ ಜಾಸ್ತಿ ಇರುವುದು.

ಚಿಕಿತ್ಸಾ ವಿಧಾನ

  • ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು

4. ಗಂಭೀರ ಸ್ವರೂಪದ ಮಕ್ಕಳ ಪ್ರಕರಣ

  • ಶ್ವಾಸಕೋಶದಲ್ಲಿ ನ್ಯುಮೋನಿಯಾ ಆಗುವುದು.
  • ಆಕ್ಸಿಜನ್ ಸ್ಯಾಚುರೇಷನ್ 90 ಕ್ಕಿಂತ ಕಡಿಮೆ ಆಗುವುದು.
  • ನಾಲಿಗೆ, ತುಟಿ, ಬೆರಳು ಕಪ್ಪಾಗುವುದು.
  • ಉಸಿರಾಡಲು ಕಷ್ಟವಾಗುವುದು.
  • ಮಕ್ಕಳಲ್ಲಿ ಹೆಚ್ಚು ಆಲಸ್ಯ ಕಂಡು ಬರುವುದು.
  • ಹಗಲಿನಲ್ಲೂ ನಿದ್ದೆ ಮಂಪರು, ಫಿಟ್ಸ್ ಬರುವುದು.

ಚಿಕಿತ್ಸಾ ವಿಧಾನ‌ ಏನು?

  • ಮನೆಯಲ್ಲಿ ಇರಿಸಿಕೊಳ್ಳದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಉತ್ತಮ.

ಸದ್ಯ, ಎರಡನೇ ಅಲೆಯ ಕಾರಣಕ್ಕೆ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ, ಸಿಇಟಿ ಸೇರಿದಂತೆ ಹಲವು ಪರೀಕ್ಷೆಯನ್ನ ಮುಂದೂಡಲಾಗಿದೆ.‌ ಮೂರನೇ ಅಲೆ ನವೆಂಬರ್​​ನಲ್ಲಿ ಕಂಡು ಬರಲಿದ್ದು, ಅದಷ್ಟು ಮಕ್ಕಳನ್ನ ಜೋಪಾನ ಮಾಡಬೇಕಿದೆ. ಹೊರಗೆ ಕಳುಹಿಸುವುದು, ಆಟವಾಡಲು ಬಿಡುವುದು, ಸ್ನೇಹಿತರೊಂದಿಗೆ ಕಳುಹಿಸುವ ಕೆಲಸಕ್ಕೆ ಕೊಂಚ ಮಟ್ಟಿಗೆ ಬ್ರೇಕ್ ಹಾಕಬೇಕಿದೆ. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ.‌

ABOUT THE AUTHOR

...view details