ಬೆಂಗಳೂರು :ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಬಿಜೆಪಿ ಪಕ್ಷವು ಸಂಘಟನಾ ವ್ಯಕ್ತಿಗೆ ಮಣೆ ಹಾಕಿದ್ದು, ಕಟ್ಟಾ, ಕರಡಿ ಸಂಗಣ್ಣ, ಅರವಿಂದ ಲಿಂಬಾವಳಿ ಕುಟುಂಬಕ್ಕೆ ಟಿಕೆಟ್ ನೀಡಿದೆ. ರಾಮದಾಸ್‌ಗೆ ಟಿಕೆಟ್ ಕೈ ತಪ್ಪಿದ್ದು ಮೈಸೂರು ನಗರ ಜಿಲ್ಲಾಧ್ಯಕ್ಷರಿಗೆ ಅವಕಾಶ ಮಾಡಿಕೊಡಲಾಗಿದೆ. ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಕ್ಷೇತ್ರ ಮತ್ತು ಮಾನ್ವಿ ಕ್ಷೇತ್ರಗಳ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ.
ಬಾಕಿ ಉಳಿದಿದ್ದ 12 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಿದೆ. ಇದರ ಜೊತೆಗೆ ಮೂವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಟಿಕೆಟ್‌ಗಾಗಿ ಸಾಕಷ್ಟು ಲಾಬಿ ನಡೆಸಿದ್ದ ಸಂಸದ ಕರಡಿ ಸಂಗಣ್ಣಗೆ ಬಿಜೆಪಿ ಟಿಕೆಟ್ ನೀಡದೆ ಅವರ ಸೊಸೆ ಮಂಜುಳಾ ಅಮರೇಶ್‌ಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಕೆಲವರು ಪಕ್ಷ ತೊರೆದಿರುವುದರಿಂದ ಆಗುತ್ತಿರುವ ಡ್ಯಾಮೇಜ್ ನೋಡಿ ಎಚ್ಚೆತ್ತುಕೊಂಡ ಬಿಜೆಪಿ, ಸಂಗಣ್ಣ ಕುಟುಂಬಕ್ಕೆ ಟಿಕೆಟ್ ನೀಡುವ ಮೂಲಕ ಕೊಪ್ಪಳ ಭಾಗದಲ್ಲಿ ಬಂಡಾಯವೇಳುವುದನ್ನು ತಪ್ಪಿಸಿದೆ.
ಇನ್ನು ಮೂರು ಬಾರಿ ಶಾಸಕರಾಗಿ ಮತ್ತೊಮ್ಮೆ ಸ್ಪರ್ಧೆಗೆ ಮುಂದಾಗಿದ್ದ ಮಹದೇವಪುರ ಕ್ಷೇತ್ರದ ಹಾಲಿ ಶಾಸಕ ಅರವಿಂದ ಲಿಂಬಾವಳಿಗೆ ಬಿಜೆಪಿ ಟಿಕೆಟ್ ನೀಡದೆ ಅವರ ಪತ್ನಿಗೆ ಟಿಕೆಟ್ ನೀಡಿದೆ. ಕೆಲ ಕಾರಣಗಳಿಂದಾಗಿ ಈ ಬಾರಿ ಲಿಂಬಾವಳಿಗೆ ಟಿಕೆಟ್ ನೀಡುವುದಿಲ್ಲ ಎನ್ನಲಾಗಿತ್ತು. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದ ಲಿಂಬಾವಳಿ ಬಿಜೆಪಿ ನಾಯಕರ ಭೇಟಿ ಮಾಡಿ ಲಾಬಿ ನಡೆಸಿದ್ದರು. ಕಡೆಗೆ ಪಕ್ಷ ಅಳೆದು ತೂಗಿ ಲಿಂಬಾವಳಿಗೆ ಟಿಕೆಟ್ ನೀಡುವುದರಿಂದಾಗುವ ಡ್ಯಾಮೇಜ್ ಕಂಟ್ರೋಲ್‌ಗಾಗಿ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿದೆ.
ಹೆಬ್ಬಾಳದಲ್ಲಿ ಕಟ್ಟಾ ಸುಬ್ರಮಣ್ಯನಾಯ್ಡು ಟಿಕೆಟ್ ಗಾಗಿ ಲಾಬಿ ನಡೆಸಿದ್ದರು. ತಮಗೆ ನೀಡಿ ಇಲ್ಲವೇ ತಮ್ಮ ಪುತ್ರನಿಗೆ ಟಿಕೆಟ್ ನೀಡಿ ಎನ್ನುವ ಬೇಡಿಕೆ ಇಟ್ಟಿದ್ದರು. ಆದರೆ ಅಪ್ಪ ಮಗ ಇಬ್ಬರಿಗೂ ಮೊದಲೆರಡು ಪಟ್ಟಿಯಲ್ಲಿ ಈ ಕ್ಷೇತ್ರಕ್ಕೆ ಹೆಸರು ಪ್ರಕಟಿಸಿರಲಿಲ್ಲ. ಆದರೆ ವೈ.ಎ.ನಾರಾಯಣಸ್ವಾಮಿಗೆ ಟಿಕೆಟ್ ನೀಡಿದಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮನಗಂಡು ಕಡೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಬದಲು ಅವರ ಪುತ್ರ ಕಟ್ಟಾ ಜಗದೀಶ್ ಗೆ ಟಿಕೆಟ್ ನೀಡಿದೆ.