ಬೆಂಗಳೂರು: ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಿಸಿ, ಪರಿಣಿತರ ಸಮಿತಿ ಮೂಲಕ ಆಯ್ಕೆ ಮಾಡುವ ವಿಧಾನದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗಾಂಧಿಭವನದಲ್ಲಿ ಶವಿವಾರ ನಡೆದ ಸಂಸ್ಕೃತಿ ಸಂಗಮ- 23 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, "ಪ್ರಶಸ್ತಿ ಆಯ್ಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ. ಯಾವುದೇ ಪ್ರಶಸ್ತಿಯಾದರೂ ಅದಕ್ಕೆ ಗೌರವ ಇರಬೇಕು. ಯಾವುದೇ ಒತ್ತಡಕ್ಕೆ ಒಳಗಾಗಿ ಪ್ರಶಸ್ತಿ ನೀಡಬಾರದು. ರಾಜ್ಯೋತ್ಸವದಷ್ಟೇ ವರ್ಷಗಳ ಸಂಖ್ಯೆಯ ಪ್ರಶಸ್ತಿ ನೀಡುವ ಆಲೋಚನೆಯಿದೆ" ಎಂದು ತಿಳಿಸಿದರು.
"ನಾವೀಗ ಒಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಕರೆದಿದ್ದೆವು. ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಾತಿ, ಜಿಲ್ಲಾವಾರು ಮತ್ತು ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಎಲ್ಲವನ್ನು ಲೆಕ್ಕ ಹಾಕುವಾಗ, ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎನ್ನುವ ಸವಾಲು ನಮ್ಮ ಮುಂದಿದೆ. ಪ್ರಸ್ತುತ ವರ್ಷದ ಪ್ರಶಸ್ತಿ ನೀಡಲು ಎಲ್ಲಾ ಕ್ಷೇತ್ರಗಳ 20-30 ತಜ್ಞರ ಸಮಿತಿ ಮಾಡಲಾಗಿದೆ. ಸರ್ಕಾರ ನೀಡುವ ಯಾವುದೇ ಪ್ರಶಸ್ತಿಯನ್ನು ಸಮಿತಿಯೇ ಪರಿಶೀಲನೆ ಮಾಡಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಹಿಂದೆ ಕೆಲವು ಸಲ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 200- 300ಕ್ಕೆ ಮುಟ್ಟಿದೆ" ಎಂದು ಹೇಳಿದರು.
"ಸರ್ಕಾರ ಮಾಡಲು ಆಗದೇ ಇರುವ ಕೆಲಸಗಳನ್ನು ಸಂಘ- ಸಂಸ್ಥೆಗಳು, ಮಠಗಳು ಮಾಡುತ್ತಿವೆ. ಅನೇಕ ಸಾಧಕರನ್ನು ಗುರುತಿಸಿ, ಸಮಾಜದ ಒಳಿತಿಗೆ ಕೆಲಸ ಮಾಡುತ್ತಿವೆ. ಇಲ್ಲಿ ನಾನೊಬ್ಬನೇ ಅಲ್ಲ, ನಮ್ಮ ಹಿರಿಯರನ್ನು ನೆನಪಿಸಿಕೊಳ್ಳಬೇಕು. ಅಧಿಕಾರ ಇರಲಿ, ಇಲ್ಲದಿರಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಿ. ಸೋಮಶೇಖರ್ ಅವರು ಪತ್ನಿಯೊಟ್ಟಿಗೆ ಸೇರಿ ಮಾಡುತ್ತಿದ್ದಾರೆ. ದೇವರು ವರ, ಶಾಪ ಏನನ್ನೂ ಕೊಡುವುದಿಲ್ಲ, ಕೇವಲ ಅವಕಾಶ ಕೊಡುತ್ತಾನೆ. ಈ ಅವಕಾಶವನ್ನು ಸಿ. ಸೋಮಶೇಖರ್ ಅವರು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.