ಕರ್ನಾಟಕ

karnataka

By

Published : Sep 5, 2019, 5:28 PM IST

ETV Bharat / state

ನಿರಾಶ್ರಿತರ ಕೇಂದ್ರದಲ್ಲಿ ವಾಸ್ತವ್ಯ ಹೂಡಲು ಸಚಿವ ಆರ್.ಅಶೋಕ್ ಚಿಂತನೆ

ನಿರಾಶ್ರಿತರ ಕೇಂದ್ರ, ಗಂಜಿ ಕೇಂದ್ರದವರ ಜೊತೆ ಸಂವಾದ ನಡೆಸುತ್ತೇನೆ ಮತ್ತು ಅಲ್ಲೇ ವಾಸ್ತವ್ಯ ಹೂಡುವ ಚಿಂತನೆ ಇದೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ. ನಿರಾಶ್ರಿತರ ಸಂಕಷ್ಟ, ಸಮಸ್ಯೆಗಳ ಬಗ್ಗೆ ಅರಿಯಲು ಸಹಕಾರಿಯಾಗಲಿದೆ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿರುವ ನಿರಾಶ್ರಿತರ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಲು ಚಿಂತಿಸಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ

ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿ ಮಾತನಾಡಿ, ನಿರಾಶ್ರಿತರ ಕೇಂದ್ರ, ಗಂಜಿ ಕೇಂದ್ರದವರ ಜೊತೆ ಸಂವಾದ ಮಾಡುತ್ತೇನೆ. ಅಲ್ಲೇ ವಾಸ್ತವ್ಯ ಹೂಡಲು ಚಿಂತನೆ ಇದೆ. ಅವರ ಕಷ್ಟ, ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲಿದ್ದೇನೆ. ಈ ವೇಳೆ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದರು.

ಇಂದು ಸರಳವಾಗಿ ಕಚೇರಿ ಪೂಜೆ ಮಾಡಿದ್ದು, ಮೊದಲ‌ ಫೈಲ್​​​​​ಗೆ ಸಹಿ ಹಾಕಿದ್ದೇನೆ. ಬೆಳಗಾವಿಗೆ ಮತ್ತೆ ನೆರೆ ಬರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ 30 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಅದೇ ರೀತಿ ಶಿವಮೊಗ್ಗಕ್ಕೆ 10 ಕೋಟಿ ರೂ‌. ಬಿಡುಗಡೆ ಮಾಡಿದ್ದೇವೆ. ಈ ಹಣ ದುರುಪಯೋಗ ಆಗಬಾರದು‌. ಯಾರೇ ಅರ್ಹರಿಗೆ ಪರಿಹಾರ ಸಿಗದಂತೆ ಆಗಬಾರದು‌. ಕೊಡಗು, ಬೆಳಗಾವಿ, ಲಿಂಗನಮಕ್ಕಿ ಪ್ರದೇಶಗಳಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿಗೆ ಇಂದು ಸಂಜೆಯೊಳಗೆ ಎನ್‌ಡಿಆರ್​ಎಫ್ ತಂಡ ಬರಲಿದೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್

ತಾತ್ಕಾಲಿಕ ಶೆಡ್ ಕಟ್ಟಲು ಹಣ :ಯಾರಿಗೆ ಬಾಡಿಗೆ ಮನೆಗೆ ಹೋಗಲು ಇಷ್ಟ ಇಲ್ಲ,‌ ಅಂತವರಿಗೆ ಶೆಡ್ ಕಟ್ಟಲು 50 ಸಾವಿರ ಹಣ ನೀಡಲು ನಿರ್ಧರಿಸಿದ್ದೇವೆ. ನಿರಾಶ್ರಿತರಿಗೆ ಮನೆ ಕಟ್ಟಲು ನೀಡಲಾದ ನಿವೇಶನದಲ್ಲೇ ಅವರೇ ತಾತ್ಕಾಲಿಕ ಶೆಡ್ ನಿರ್ಮಿಸಲು ಐವತ್ತು ಸಾವಿರ ಕೊಡುತ್ತಿದ್ದೇವೆ. ಕೂಡಲೇ ಹಣ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ಯಾವುದೇ‌ ದಾಖಲೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಗಂಜಿ ಕೇಂದ್ರ ಇನ್ನು ಕಾಳಜಿ‌ ಕೇಂದ್ರ :ಇನ್ನು ಮುಂದೆ‌ ಗಂಜಿ ಕೇಂದ್ರ ಹಾಗೂ ನಿರಾಶ್ರಿತರ ಕೇಂದ್ರವನ್ನು ಕಾಳಜಿ ಕೇಂದ್ರ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಗಂಜಿ ಕೇಂದ್ರ ಎಂಬ ಪದ ಬಳಕೆ ಸರಿ ಇಲ್ಲ. ಅದು ಅವಮಾನ‌‌ ಮಾಡಿದ ಹಾಗಾಗುತ್ತದೆ. ಅದನ್ನು ಕಾಳಜಿ ಕೇಂದ್ರವಾಗಿ ಹೆಸರಿಡಲು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಈ ಸಂಬಂಧ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.

ಪರಿಹಾರ ಹಣ ಬಿಡುಗಡೆಗೆ ಪ್ರಧಾನಿಗೆ ಮನವಿ :

ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದು, ಅವರ ಬಳಿ ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಿದ್ದೇವೆ. ನಾಲ್ಕು ದಿನಗಳ ಹಿಂದೆ, ಒಟ್ಟು ಪ್ರವಾಹ ಹಾನಿ ಪ್ರಮಾಣದ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ನೀಡಿದ್ದೇವೆ. ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ ಎಂದು ಎಲ್ಲೂ ಕಾಮಗಾರಿ ನಿಲ್ಲಿಸಿಲ್ಲ. ಆ ತರಹದ ಯಾವುದೇ ಸಮಸ್ಯೆ ಆಗಿದ್ದು ನಮ್ಮ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುತ್ತೇವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೈತರ ಸಾಲ ಮರುಪಾವತಿಗೆ ಒತ್ತಾಯಿಸದಂತೆ ಖಾಸಗಿ‌ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ‌ ಎಂದರು.

ಡಿಕೆಶಿ ಬಂಧನ ರಾಜಕೀಯ ಪ್ರೇರಿತವಲ್ಲ:

ಡಿಕೆಶಿ ಬಂಧನ ರಾಜಕೀಯ ಪ್ರೇರಿತ ಎಂದು ಪ್ರತಿ ಪಕ್ಷಗಳು ಆರೋಪಿಸುತ್ತಿದೆ. ಈ ಹಿಂದೆ ಯಡಿಯೂರಪ್ಪರನ್ನು ಬಂಧಿಸಿದಾಗ ಈ ಮಾತು ಬಂದಿತ್ತಾ.‌ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ಇದು ಕೋರ್ಟ್ ಕೊಟ್ಟ ಆದೇಶ. ಅಮಿತ್ ಶಾ, ಬಿಎಸ್​ವೈ, ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ಮಾಡಿ ಹೊರ ಬಂದಿಲ್ವಾ, ನೀವು ಹಾಗೇ ಹೊರ ಬನ್ನಿ. ಅದರ ಬದಲು ಪ್ರತಿಭಟನೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಾರ ತುರಾಯಿ ಬದಲು ನೆರೆ ಸಂತ್ರಸ್ತರಿಗೆ ಧನ ಸಂಗ್ರಹ :

ಕಚೇರಿ ಪೂಜೆಗೆ ಆಗಮಿಸುವವರು ಹಾರ ತುರಾಯಿ ತರುವ ಬದಲು ನೆರೆ ಸಂತ್ರಸ್ತರಿಗೆ ಧನ ಸಹಾಯ ಮಾಡುವಂತೆ ಆರ್.ಅಶೋಕ್ ಮನವಿ ಮಾಡಿದರು. ಈ ಹಿನ್ನೆಲೆ ತಮ್ಮ ಕಚೇರಿಯಲ್ಲಿ ಪರಿಹಾರ ಸಂಗ್ರಹದ ಪೆಟ್ಟಿಗೆಯನ್ನು ಇಟ್ಟು ಕಚೇರಿ ಪೂಜೆಗೆ ಬಂದವರಿಂದ ದೇಣಿಗೆ ಸಂಗ್ರಹ ಮಾಡಿದರು.

ABOUT THE AUTHOR

...view details