ಬೆಂಗಳೂರು: ರಾಜ್ಯದ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಬೆಂಗಳೂರಿನ 50 ದೇವಸ್ಥಾನಗಳು ಸೇರಿದಂತೆ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಚಾಲಕ ಮೋಹನ್ ಗೌಡ ತಿಳಿಸಿದ್ದಾರೆ.
ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಹಾಸಂಘ ನಿರ್ಧರಿಸಿದೆ ಎಂದು ಮಹಾಸಂಘದ ಸಂಚಾಲಕ ಮೋಹನ್ ಗೌಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದು, "ಇಂದು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಕೆಲ ಪ್ರಗತಿಪರರು, ವಿಚಾರವಾದಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕಿಡಿಕಾರಿದ್ದಾರೆ.
"ದೇವರ ದರ್ಶನಕ್ಕಾಗಿ ತುಂಡು ಬಟ್ಟೆ ಅಥವಾ ಸಾಂಪ್ರದಾಯಿಕವಲ್ಲದ ಉಡುಗೆಯಲ್ಲಿ ದೇವಸ್ಥಾನಗಳಿಗೆ ಹೋಗುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಾರದು. ಪ್ರತಿಯೊಬ್ಬರಿಗೂ ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಏನು ಧರಿಸಬೇಕೆಂಬ ವೈಯಕ್ತಿಕ ಸ್ವಾತಂತ್ರ್ಯವಿದೆ. ಆದರೆ ದೇವಸ್ಥಾನದಲ್ಲಿ ನಮ್ಮ ಸಂಸ್ಕೃತಿಯಂತೆ ವಸ್ತ್ರ ಧರಿಸುವುದು ಅವಶ್ಯಕವಾಗಿದೆ. ದೇವಾಲಯದ ಆವರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ ಧರ್ಮವನ್ನು ಪಾಲಿಸುವುದು ಮುಖ್ಯ. ಹಾಗಾಗಿ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಹಾಸಂಘ ನಿರ್ಧರಿಸಿದೆ" ಎಂದು ಮೋಹನ್ ಗೌಡ ತಿಳಿಸಿದ್ದಾರೆ.