ಬೆಂಗಳೂರು: ನಮ್ಮ ದೇಶಕ್ಕೆ ಹೊರಗಿನಿಂದ ಮಹಿಳಾ ಉದ್ಯೋಗಿಗಳು ಬಂದು ಯಶಸ್ವಿಯಾಗುತ್ತಿರುವಂತೆ ನಮ್ಮ ನಾಡಿನ ಮಹಿಳೆಯರೂ ವಿದೇಶದಲ್ಲಿ ಯಶಸ್ವಿ ಉದ್ಯಮಿಗಳಾಗಬೇಕು. ಇಲ್ಲಿನ ಸ್ತ್ರೀಶಕ್ತಿ ಸಂಘಗಳಿಂದ ತಯಾರಾದ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗಬೇಕು. ಆ ರೀತಿ ನಮ್ಮ ಮಹಿಳಾ ಉದ್ಯಮಿಗಳು ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ರಾಜ್ಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸುಮಂಗಲಿ ಸೇವಾ ಆಶ್ರಮದ ಸಂಯುಕ್ತಾಶ್ರಯದಲ್ಲಿ ಕುಮಾರಕೃಪಾ ರಸ್ತೆಯ ಬಳಿ ಇರುವ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಸ್ವಯಂಸೇವಾ ಸಂಸ್ಥೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀಶಕ್ತಿ ಸಬಲೀಕರಣ ಆಗಬೇಕು: ವಿದೇಶಿ ಮಹಿಳೆಯರು ನಮ್ಮ ದೇಶಕ್ಕೆ ಬಂದು ಕಂಪನಿ ಸ್ಥಾಪಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಸ್ತ್ರೀಶಕ್ತಿ ಕೂಡ ಸಬಲೀಕರಣ ಆಗಬೇಕು. ಹೇಗೆ ವಿದೇಶದ ವಸ್ತುಗಳು ಇಲ್ಲಿ ಮಾರಾಟವಾಗುತ್ತಿವೆಯೋ ಆ ರೀತಿ ಇಲ್ಲಿನ ಸ್ತ್ರೀಶಕ್ತಿ ಸಂಘಟನೆಗಳಿಂದ ತಯಾರಾಗುವ ವಸ್ತುಗಳು ವಿದೇಶದಲ್ಲಿ ಮಾರಾಟವಾಗಬೇಕು. ಆಗ ನಮ್ಮ ಆರ್ಥಿಕತೆಗೆ ಬಹಳ ದೊಡ್ಡ ಶಕ್ತಿ ಬರಲಿದೆ ಎಂದರು.
ಮಹಿಳೆಯರ ದುಡಿಮೆಗೆ ತಕ್ಕ ಬೆಲೆ ಸಿಗಲಿ:ಮಹಿಳೆಯರಿಗೆ ಯೋಗ್ಯವಾಗಿರುವ ಗೌರವ ಮತ್ತು ಸ್ಥಾನ ಇನ್ನೂ ಸಿಕ್ಕಿಲ್ಲ. ಅವರ ದುಡಿಮೆಗೆ ನಾವು ಬೆಲೆ ಕೊಟ್ಟಾಗ ಮಾತ್ರ ಅವರಿಗೆ ಆ ಸ್ಥಾನ ಸಿಗಲಿದೆ. ಅವರ ದುಡಿಮೆಗೆ ಎಲ್ಲಿಯವರೆಗೆ ಬೆಲೆ ಇರುವುದಿಲ್ಲವೋ ಅಲ್ಲಿಯವರೆಗೂ ಅವರು ಸ್ವಾವಲಂಬಿಯಾಗಿರುವುದಿಲ್ಲ. ಹೀಗಾಗಿ ಅವರಿಗೆ ಕಾರ್ಮಿಕ ಸ್ವಾತಂತ್ರ್ಯ ಬಂದಾಗ ಖಂಡಿತವಾಗಿ ಸಾಮಾಜಿಕ, ಶೈಕ್ಷಣಿಕ ಎಲ್ಲಾ ಸ್ವಾತಂತ್ರ್ಯಗಳು ಮಹಿಳೆಯರಿಗೆ ಲಭಿಸಲಿವೆ. ಈ ಹಿನ್ನೆಲೆ ಸೇವಾ ಸಂಸ್ಥೆಗಳು ದೊಡ್ಡ ಪಾತ್ರವಹಿಸಬೇಕು ಎಂದು ಕರೆ ನೀಡಿದರು.
ಆರ್ಥಿಕ ನೆರವು ನೀಡುವ ಯೋಜನೆ:ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಅಕ್ಟೋಬರ್ 2 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಪ್ರಥಮ ಬಾರಿ ಆಯವ್ಯಯದಲ್ಲಿ 1.5 ಲಕ್ಷ ರೂ.ಗಳ ಆರ್ಥಿಕ ನೆರವು, ಆ್ಯಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್‍ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಮೆಜಾನ್ ನಂತಹ ಆನ್‍ಲೈನ್ ವೇದಿಕೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ವಹಿವಾಟನ್ನು ಮಾಡುತ್ತಿದೆ. ಇದು ಸಂಘಟಿತವಾದ ಶ್ರಮದ ಶಕ್ತಿ ಎಂದು ತಿಳಿಸಿದರು.
ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆದ ಸಿಎಂ