ಬೆಂಗಳೂರು: ಪೊಲೀಸರ ಸೋಗಿನಲ್ಲಿ ಯುವಕರ ಮನೆಗೆ ನುಗ್ಗಿದ ದರೋಡೆಕೋರರು, ಫೋನ್ ಪೇ ಮೂಲಕ 13 ಸಾವಿರ ರೂ. ಹಾಕಿಸಿಕೊಂಡು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿ ಪರಿಶೀಲನೆ ನೆಪದಲ್ಲಿ ಮನೆಯೊಳಗೆ ಬಂದು, ಬಳಿಕ ಹಣ ಮತ್ತು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ.
ವಿದ್ಯಾರಣ್ಯಪುರದ ರಾಮಚಂದ್ರಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ನಾಲ್ವರು ಯುವಕರು ವಾಸಿಸುತ್ತಿದ್ದರು. ಈ ಪೈಕಿ ಮೂವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಓರ್ವ ಯುವಕ ವ್ಯಾಸಂಗ ಮಾಡುತ್ತಿದ್ದ. ಬುಧವಾರ ಬೆಳಗ್ಗೆ ನಾಲ್ವರು ಅಪರಿಚಿತರು ಇವರ ಮನೆಯ ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ ಆರೋಪಿಗಳು ತಮ್ಮನ್ನು ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. ನಿಮ್ಮ ರೂಂನಲ್ಲಿ ನೀವು ಡ್ರಗ್ಸ್ ಸೇವಿಸುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದು ಹೇಳಿ ಮನೆಯೆಲ್ಲಾ ಪರಿಶೀಲಿಸಿದ್ದರು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಸಿಗದಿದ್ದಾಗ ಯುವಕರಿಗೆ ಚೂರಿ ತೋರಿಸಿದ ಅಪರಿಚಿತರು, ಅವರ ಕೈಯಲ್ಲಿದ್ದ ಉಂಗುರ, ಕಿವಿಯಲಿದ್ದ ಇಯರ್‌ರಿಂಗ್ ಕಸಿದುಕೊಂಡಿದ್ದರು.
ನಂತರ ಫೋನ್ ಪೇನಲ್ಲಿ 13 ಸಾವಿರ ರೂ. ಅನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಪರಾರಿಯಾಗಿದ್ದಾರೆ. ಇದೀಗ ದರೋಡೆಗೊಳಗಾದ ಯುವಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಆರೋಪಿಗಳಿಗೆ ಶೋಧ ನಡೆಸುತ್ತಿರುವುದಾಗಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.