ಬೆಂಗಳೂರು: ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದ ಖಾಸಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳ್ಳನೋರ್ವ ವರದಿಗಾರ್ತಿಯ ವ್ಯಾಲೆಟ್ ಕದ್ದೊಯ್ದಿರುವ ಪ್ರಕರಣ ಸಂಬಂಧ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 7ರಂದು ಮಾರತಹಳ್ಳಿ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಖಾಸಗಿ ವಾಹಿನಿಯ ವರದಿಗಾರ್ತಿಯ 10 ಸಾವಿರ ರೂ. ನಗದು, ವಜ್ರದ ಕಿವಿಯೋಲೆ, ಡೆಬಿಟ್ ಕಾರ್ಡ್ ಇದ್ದ ವ್ಯಾಲೆಟ್ಅನ್ನು ಖದೀಮನೋರ್ವ ಎಗರಿಸಿ ಪರಾರಿಯಾಗಿದ್ದಾನೆ.
ಇಂಟರ್ಯಾಕ್ಟೀವ್ ಫೋರಂ ಆನ್ ಇಂಡಿಯನ್ ಎಕಾನಮಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ರತ್ನ ಸಿಎನ್‌ಆರ್ ರಾವ್, ಪದ್ಮವಿಭೂಷಣ ಎಸ್ ಎಂ ಕೃಷ್ಣ, ಪದ್ಮ ವಿಭೂಷಣ ಡಿ. ವೀರೇಂದ್ರ ಹೆಗ್ಗಡೆ, ಹಿರಿಯ ನಟಿ ಬಿ. ಸರೋಜದೇವಿ, ನಟರಾದ ರವಿಚಂದ್ರನ್, ಉಪೇಂದ್ರ, ಸಂಸದ ತೇಜಸ್ವಿ ಸೂರ್ಯ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಸಮಾರಂಭದ ಬಳಿಕ ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ ಕಳ್ಳ ತನ್ನ ಕೈಚಳಕ ತೋರಿಸಿದ್ದು, ಹೋಟೆಲ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳ ಸಮೇತ ದೂರು ನೀಡಿದರೂ ಸಹ, ಪೊಲೀಸರು 'ಹೋಟೆಲ್‌ನವರ ಕಡೆಯಿಂದ ದೂರು ನೀಡುವಂತೆ ಹೇಳುತ್ತಿದ್ದಾರೆ.' ಆದರೆ ಹೋಟೆಲ್‌ನವರು ದೂರು ನೀಡಲು ಸಿದ್ಧರಿಲ್ಲ ಎಂದು ವರದಿಗಾರ್ತಿ ಎಕ್ಸ್ ಆ್ಯಪ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ದೂರನ್ನು ಪರಿಗಣಿಸುವಂತೆ ಬೆಂಗಳೂರು ನಗರ ಪೊಲೀಸ್ ಎಕ್ಸ್ ಖಾತೆಯಿಂದ ಸಂಬಂಧಪಟ್ಟ ಪೊಲೀಸರಿಗೆ ಸೂಚಿಸಲಾಗಿದೆ.