ಬೆಂಗಳೂರು:ಸಾಲ ತೀರಿಸಲು ಪೂಜೆ ಮಾಡಿಸುವ ನೆಪದಲ್ಲಿ ದೇವಾಲಯಗಳಿಗೆ ಹೋಗಿ ದೇವಿಯ ಚಿನ್ನದ ತಾಳಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಕಲೇಶ ಬಂಧಿತ ಆರೋಪಿ.
ಕೃಷಿ ಮಾಡುತ್ತಿದ್ದ ಆರೋಪಿ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ನಗರದ ವಿವಿಧ ದೇವಾಲಯಗಳಿಗೆ ಪೂಜೆ ಮಾಡಿಸುವ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದ. ಕಳೆದ ತಿಂಗಳು ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಿಕಾಪರಮೇಶ್ವರಿ ದೇವಾಲಯಕ್ಕೆ ತೆರಳಿ ಯಾರು ಇಲ್ಲದ ಸಮಯದಲ್ಲಿ ದೇವಿಯ ಮಾಂಗಲ್ಯ ಎಗರಿಸಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಸಿಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿದೆ.
ಕಳ್ಳತನ ಮಾಡುವ ಉದ್ದೇಶದಿಂದಲೇ ನಗರಕ್ಕೆ ಬರುತ್ತಿದ್ದ ಕಲೇಶ್, ಬೆಳಗಿನ ವೇಳೆ ಬಂದು ಮಡಿಲಕ್ಕಿ ಸೇವೆ ಸೇರಿದಂತೆ ವಿವಿಧ ರೀತಿಯ ಪೂಜೆ ಮಾಡಿಸಬೇಕೆಂದು ಹೇಳುತ್ತಿದ್ದ. ಈತನ ಮಾತನ್ನು ನಂಬುತ್ತಿದ್ದ ಅರ್ಚಕರು ಪೂಜೆ ಮಾಡಿಸಲು ಸಿದ್ಧತೆ ನಡೆಸುತ್ತಿದ್ದರು. ಅಲ್ಲದೆ ಭಕ್ತಾದಿಗಳು ಇಲ್ಲದ ಸಮಯ ನೋಡಿಕೊಂಡು ಕ್ಷಣಾರ್ಧದಲ್ಲಿ ದೇವಿಗೆ ಹಾಕಿದ್ದ ಮಾಂಗಲ್ಯ ಸರ ಕಳ್ಳತನ ಮಾಡುತ್ತಿದ್ದ.
ಬಳಿಕ ಊರಿಗೆ ತೆರಳಿ ಚಿನ್ನಾಭರಣ ಅಡವಿಟ್ಟು ಹಣ ಮಾಡಿಕೊಳ್ಳುತ್ತಿದ್ದ. ಶ್ರೀರಾಮಪುರ, ಮಾಗಡಿ ರೋಡ್, ಪೀಣ್ಯ ಹಾಗೂ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಗಳ ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ ಎಂದು ನಗರ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಗಂಡನಿಂದ ಮನೆಗೆ ಗಂಡಾಂತರ ಎಂದು ಹಣ ಪೀಕಿದ್ದ ಕಳ್ಳ ಜ್ಯೋತಿಷಿ, ಬಾಲಕನ ಬಂಧನ