ಬೆಂಗಳೂರು:ಎರಡು ವರ್ಷದಲ್ಲಿ ಈ ಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರು ತರಿಸುತ್ತೇನೆ ಎಂದು ಹೇಳಿ ಸಂಸದರಾಗಿ ಆಯ್ಕೆಯಾದ ಎಂ.ವೀರಪ್ಪ ಮೊಯ್ಲಿ ಹತ್ತು ವರ್ಷಗಳಾದರೂ ನೀರು ತಂದಿಲ್ಲ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀರಾವರಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕೋಲಾರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಸೇರಿದಂತೆ ಈ ಭಾಗದ ಜನರು ನೀರಿಗಾಗಿ ಹಾತೊರೆಯುತ್ತಿದ್ದಾರೆ. ಬಯಲು ಪ್ರದೇಶ ಭಾಗದ ಜನರಿಗೆ ಪ್ರಮುಖವಾಗಿ ನೀರು ಬೇಕಿದ್ದು, ಅದನ್ನು ಒದಗಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ. 2009 ರಲ್ಲಿ ವೀರಪ್ಪಮೊಯ್ಲಿ ಅವರು ಈ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಎರಡು ವರ್ಷದಲ್ಲಿ ನೀರು ತರುತ್ತೇನೆ ಎಂದು ಹೇಳಿದ್ದರು. ಆದರೆ ಇದುವರೆಗೂ ನೀರು ಬಂದಿಲ್ಲ. ಅದು ಬರುವುದೂ ಇಲ್ಲ ಎಂದು ಮೊಯ್ಲಿ ವಿರುದ್ದ ಅಸಮಾಧಾನ ಹೊರಹಾಕಿದರು.