ಬೆಂಗಳೂರು: ಅಸೂಯೆಗೆ ಮದ್ದಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ಪತ್ರ ಬರೆದಿರುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು, ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ಮಾಡಿಸೋಣ. ಪತ್ರ ಬರೆದಿರೋದು ನನಗೆ ಗೊತ್ತಿಲ್ಲ. ಅಸೂಯೆಗೆ ಮದ್ದು ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪಾಪ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ನಾವು ಮಂಡ್ಯದಲ್ಲಿ ಏಳಕ್ಕೆ ಆರು ಸೀಟು ಗೆದ್ದು ಬಿಟ್ಟಿದ್ದೀವಲ್ಲ ಅದು ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಹೊಟ್ಟೆಕಿಚ್ಚು ಮತ್ತು ಅಸೂಯೆಗೆ ಮದ್ದಿಲ್ಲ. ನಮ್ಮ ಮೇಲೆ ಅವರು ಬೇರೆ ಬೇರೆ ಆರೋಪಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಮಾಡಿಸೋಣ ಎಂದರು.
ಮಲ್ಲೇಶ್ವರಂ, ಆರ್ ಆರ್ ನಗರದಲ್ಲಿ ಬಿಲ್ ಆಗ್ತಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೂ ಜವಾಬ್ದಾರಿ ಇದೆ. ಮಾಜಿ ಸಚಿವ ಅಶ್ವತ್ಥನಾರಾಯಣ್ ಅವರು ಈ ಬಗ್ಗೆ ತನಿಖೆ ಮಾಡಲೇಬೇಕು ಎಂದಿದ್ದಾರೆ. ಅವರ ನುಡಿಮುತ್ತುಗಳನ್ನ ನಾವು ಕೇಳಬೇಕಲ್ಲ. ಬೇರೆ ಕಡೆಯಲ್ಲಿ ಬಿಲ್ ಆಗೋದಕ್ಕೆ 3 ವರ್ಷ ಆಗಬೇಕು. ಯಾರು ಅಪ್ರೂವಲ್ ಕೊಟ್ಟರು ನೋಡಬೇಕು. ಈ ಬಗ್ಗೆ ತನಿಖೆಯಾಗಬೇಕು ಎಂದು ತಿಳಿಸಿದರು.