ಕರ್ನಾಟಕ

karnataka

ETV Bharat / state

ಸಚಿವ ಸಂಪುಟದಲ್ಲಿ ಬೆಂಗಳೂರಿಗೆ ಬಂಪರ್: ಈ 9 ಜಿಲ್ಲೆಗಳಿಗೆ ಸಿಗದ ಮಂತ್ರಿ ಸ್ಥಾನ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ 9 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತ್ತಿಲ್ಲ. ಈ ಜಿಲ್ಲೆಗಳ ವಿವರ ಇಲ್ಲಿದೆ

By

Published : May 27, 2023, 8:47 PM IST

these-9-districts-did-not-get-ministerial-post-in-karnataka-new-cabinet
ಸಚಿವ ಸಂಪುಟದಲ್ಲಿ ಬೆಂಗಳೂರಿಗೆ ಬಂಪರ್: ಈ 9 ಜಿಲ್ಲೆಗಳಿಗೆ ಸಿಗದ ಮಂತ್ರಿ ಸ್ಥಾನ!

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ಅತಿ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ. ಬೆಂಗಳೂರಿನ ಆರು ಜನ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 22 ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿದ್ದು. ಒಂಬತ್ತು ಜಿಲ್ಲೆಗಳಿಗೆ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ.

ಸಚಿವ ಸಂಪುಟದ ಎಲ್ಲ 34 ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದರೂ ಸಹ ಹಲವಾರು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದ ಬೆಂಗಳೂರಿಗೆ ಆರು ಸಚಿವ ಸ್ಥಾನಗಳನ್ನ, 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನ ನೀಡಲಾಗಿದೆ. ಬೀದರ್ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲಾಗಿದ್ದರೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಒಬ್ಬೊಬ್ಬ ಶಾಸಕರಿಗೆ ಮಂತ್ರಿ ಪದವಿಯನ್ನು ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಮಂತ್ರಿ ಮಂಡಲವನ್ನ ರಚಿಸಿದ್ದು ಜಾತಿವಾರು, ಪ್ರಾದೇಶಿಕವಾರು ಹಾಗೂ ಜಿಲ್ಲಾ ವಾರು ಪ್ರಾತಿನಿಧ್ಯ ನೀಡುವಲ್ಲಿ ಶ್ರಮಿಸಿದ್ದಾರೆ. ಆದರೂ ಚಿಕ್ಕಮಗಳೂರು , ಹಾಸನ, ಕೊಡಗು, ಹಾವೇರಿ ಸೇರಿದಂತೆ 9 ಜಿಲ್ಲೆಗಳಿಗೆ ಸಂಪುಟದಲ್ಲಿ ಅವಕಾಶ ನೀಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸಿದ್ದರೂ ಆ ಜಿಲ್ಲೆಗೆ ಒಂದೂ ಸಚಿವ ಸ್ಥಾನ ನೀಡದಿರುವುದು ಚರ್ಚೆಗೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.

ಸಚಿವ ಸ್ಥಾನದ ಪ್ರಾತಿನಿಧ್ಯ ಸಿಗದ ಜಿಲ್ಲೆಗಳ ವಿವರ ಹೀಗಿದೆ: ಹಾವೇರಿ, ವಿಜಯನಗರ, ಕೋಲಾರ, ಹಾಸನ,ಕೊಡಗು, ಚಿಕ್ಕಮಗಳೂರು, ಉಡುಪಿ
ದಕ್ಷಿಣ ಕನ್ನಡ, ಚಾಮರಾಜನಗರ ಈ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಅವಕಾಶವನ್ನು ನೀಡಲಾಗಿಲ್ಲ. ಮಂತ್ರಿ ಮಂಡಲದಲ್ಲಿ ಅವಕಾಶ ದೊರೆಯದಿದ್ದರೂ ಮಂಗಳೂರಿನ ಶಾಸಕ ಯು. ಟಿ ಖಾದರ್ ಅವರನ್ನು ವಿಧಾನಸಭೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಿರಿಯ ಶಾಸಕ ಪುಟ್ಟರಂಗ ಶೆಟ್ಟಿಯವರನ್ನು ಉಪ ಸಭಾಧ್ಯಕ್ಷರನ್ನಾಗಿ ನೇಮಿಸಲು ಸಿದ್ದರಾಮಯ್ಯ ಒಲವು ತೋರಿದ್ದಾರೆ. ಆ ಮೂಲಕ ಚಾಮರಾಜನಗರ ಜಿಲ್ಲೆಗೂ ಅಧಿಕಾರದ ಹಂಚಿಕೆ ಮಾಡುವ ಲೆಕ್ಕಾಚಾರ ಹೊಂದಿದ್ದಾರೆ.

ಮಂತ್ರಿ ಮಂಡಲಕ್ಕೆ ಸೇರಲು ಬೆಂಗಳೂರಿನ ಕಾಂಗ್ರೆಸ್ ಶಾಸಕರಿಂದ ಹೆಚ್ಚಿನ ಪ್ರಮಾಣದ ಒತ್ತಡ ಇದ್ದಿದ್ದರಿಂದ ಬೆಂಗಳೂರಿಗೆ ಆರು ಸಚಿವ ಸ್ಥಾನದ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ, ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ , ಜಮೀರ್ ಅಹ್ಮದ್​ ಖಾನ್​, ಬೈರತಿ ಸುರೇಶ್ ಅವರು ಬೆಂಗಳೂರು ಕೋಟಾದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರಿನವರೇ ಆದ ಮಾಜಿ ಸಚಿವ ಎಂ ಕೃಷ್ಣಪ್ಪ ಹಾಗೂ ಆನೇಕಲ್ ಶಾಸಕ ಎಂ ಶಿವಣ್ಣ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಂತಿಮ ಕ್ಷಣದಲ್ಲಿ ಇವರಿಗೆ ಮಂತ್ರಿ ಪದವಿ ಕೈ ತಪ್ಪಿದೆ.

ಶಾಂತಿನಗರದ ಶಾಸಕ ಎನ್​ ಎಂ ಹ್ಯಾರೀಸ್ ಸಹ ಸಚಿವ ಸ್ಥಾನದ ಬಹು ನಿರೀಕ್ಷೆಯಲ್ಲಿ ಇದ್ದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹ್ಯಾರಿಸ್ ಪರ ಬ್ಯಾಟಿಂಗ್ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಜಮೀರ್ ಅಹ್ಮದ್ ಅವರನ್ನ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದರಿಂದ ಹ್ಯಾರೀಸ್ ಅವರಿಗೆ ಸಚಿವರಾಗುವ ಅವಕಾಶ ತಪ್ಪಿದಂತಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲು ಸಹಾಯಕವಾಗುವಂತೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವನ್ನ ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು '' ಈಟಿವಿ ಭಾರತ'' ಕ್ಕೆ ತಿಳಿಸಿವೆ. ಕೆಲವು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ಇರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ಸಂಪುಟ ರಚನೆಯನ್ನು ಮಾಡಲಾಗಿದೆ. ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವುದು ಕಷ್ಟಕರವಾಗಿತ್ತು. ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ನೀಡಬಾರದು ಎನ್ನುವ ನೀತಿಯನ್ನು ಅನುಸರಿಸಲಾಗಿದೆ. ಆ ಪ್ರಕಾರ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ದೇವರು, ಬಸವೇಶ್ವರ, ಛತ್ರಪತಿ ಶಿವಾಜಿ, ಸತ್ಯ ನಿಷ್ಠೆಯ ಮೇಲೆ 24 ಸಚಿವರ ಪದಗ್ರಹಣ

ABOUT THE AUTHOR

...view details