ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ದಿನದಿಂದ ದಿನಕ್ಕೆ ಸುಡುಬಿಸಿಲು ಹೆಚ್ಚುತ್ತಿದ್ದು, ಉಷ್ಣ ಮಾರುತ ಆತಂಕ ಶುರುವಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 38-39 ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಏರಿಕೆಯಾಗಿದೆ.
ಏಪ್ರಿಲ್ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಏಪ್ರಿಲ್ ಮೊದಲನೇ ವಾರದಲ್ಲಿ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನ ಭಾಗದಲ್ಲಿ ಈ ಬಾರಿ ಚಳಿಯ ವಾತಾವರಣ ಹೆಚ್ಚಿತ್ತು. ಹಾಗೆಯೇ ಬೇಸಿಗೆಯ ಬಿಸಿಲಿನ ತಾಪವೂ ಹೆಚ್ಚಾಗಲಿದೆ.
ಗರಿಷ್ಠ ತಾಪಮಾನ 45 ಡಿಗ್ರಿಗೆ ತಲುಪುವ ಸಾಧ್ಯತೆ : ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಅಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45 -46 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸರಾಸರಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಗೆಯಾಗುವ ಸಾಧ್ಯತೆ ಇದೆ.
ಅರೆಂಜ್, ಯೆಲ್ಲೋ, ರೆಡ್ ಆಲರ್ಟ್ ಯಾಕೆ ಮಾಡುತ್ತಾರೆ? ಎಚ್ಚರಿಕೆ ಏನು? :ತಾಪಮಾನ 35.9 ಡಿಗ್ರಿ ದಾಟಿದರೆ ಹವಾಮಾನ ಇಲಾಖೆ ಮೂರು ರೀತಿಯ ಎಚ್ಚರಿಕೆಯನ್ನು ಸಾಮಾನ್ಯವಾಗಿ ನೀಡುತ್ತದೆ. ಜನರು ಹಾಗೂ ಅಧಿಖಾರಿಗಳು ಎಚ್ಚರವಾಗಿರಲು ಮಾಧ್ಯಮಗಳ ಮೂಲಕ ಈ ಸೂಚನೆಗಳಿಗೆ ಪ್ರಚಾರ ನೀಡುತ್ತದೆ. ಅಲ್ಲದೆ ನಗರ, ಪಟ್ಟಣಗಳಲ್ಲಿ ಡಿಜಿಟಲ್ ಬೋರ್ಡ್ಗಳಲ್ಲಿಯೂ ಜಾಹೀರಾತು ರೀತಿಯಲ್ಲಿ ಪ್ರದರ್ಶಿಸಲಾಗುತ್ತದೆ. 36-40 ಡಿಗ್ರಿ ತಾಪಮಾನ ಇದ್ದರೆ ಯೆಲ್ಲೋ ಅಲರ್ಟ್ (ಮೇಲ್ವಿಚಾರಣೆ), 41-45 ಡಿಗ್ರಿ ಆರೆಂಜ್ ಅಲರ್ಟ್ (ಅಸುರಕ್ಷಿತ) ಮತ್ತು 45 ಡಿಗ್ರಿಗಿಂತ ಹೆಚ್ಚಿನ ತಾಪಮಾನಕ್ಕೆ ರೆಡ್ ಅಲರ್ಟ್(ಎಚ್ಚರಿಕೆ) ಎಂದು ಹೇಳಲಾಗುತ್ತದೆ. ಪ್ರಸ್ತುತ 2 ದಿನಗಳ ಹಿಂದೆ ನೆರೆಯ ತೆಲಂಗಾಣ ರಾಜ್ಯವು ಅರೆಂಜ್ ಆಲರ್ಟ್ ಎಚ್ಚರಿಕೆ ಮಟ್ಟದ ತಾಪಮಾನ ದಾಖಲಿಸುವ ನಿಟ್ಟಿನಲ್ಲಿ ಸಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ತಾಪಮಾನದಲ್ಲಿ ಹೆಚ್ಚಾಗುತ್ತಿರುವುದು ಎದ್ದು ಕಾಣುತ್ತಿದೆ. ಏಪ್ರಿಲ್ನ ಇದೇ ತಿಂಗಳ ಮೊದಲನೇ ವಾರದಿಂದ ಜೂನ್ವರೆಗೂ ಹೆಚ್ಚು ತಾಪಮಾನ ದಾಖಲಾಗುವ ಮುನ್ಸೂಚನೆಯನ್ನು ಈಗಾಗಲೇ ಹವಾಮಾನ ಇಲಾಖೆ ನೀಡಿದೆ. ಹೊರಾಂಗಣದಲ್ಲಿ ಕೆಲಸ ಮಾಡುವವರು ಮತ್ತು ಪ್ರಯಾಣ ಮಾಡುವವರು ತಾಪಮಾನದ ಬಗ್ಗೆ ಸ್ವಲ್ಪ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗು ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಮಧ್ಯಾಹ್ನದ ವೇಳೆ ತಂಪು ಅಥವಾ ನೆರಳಿನ ವಾತಾವರಣದಲ್ಲಿ ಇರುವುದು ಉತ್ತಮವಾಗಿದೆ.
ಇದನ್ನೂ ಓದಿ :ಬೆಂಗಳೂರಿಗೆ ಇಂದಿನಿಂದ 3 ದಿನ ಮಳೆ ಮುನ್ಸೂಚನೆ