ಬೆಂಗಳೂರು:ರಾಜ್ಯದಲ್ಲಿ 2 ದಿನ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ರಾಜ್ಯದ ನಾಯಕರ ಜೊತೆ ಚರ್ಚೆಗೆ ಉತ್ಸಾಹ ತೋರುತ್ತಿಲ್ಲ ಎನ್ನಲಾಗುತ್ತಿದೆ. ಕಾರಣ ಪ್ರಬಲ ಆಕಾಂಕ್ಷಿ ರಮೇಶ್ ಜಾರಕಿಹೊಳಿ ಅವರನ್ನು ಅಮಿತ್ ಶಾ ಜೊತೆ ಇದೇ ನಾಯಕರು ಭೇಟಿ ಮಾಡಿಸುವ ಪ್ರಯತ್ನ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಪಕ್ಷದ ಚಾಣಾಕ್ಯನಿಂದ ಭರವಸೆ ಸಿಗಲಿದೆ ಎಂದುಕೊಂಡಿದ್ದ ಸಾಹುಕಾರ ನಿರಾಶರಾಗಿ ತಾಜ್ ವೆಸ್ಟ್ ಎಂಟ್ ಹೋಟೆಲ್ ನ ಹಿಂಭಾಗದ ದ್ವಾರದಿಂದ ನಿರ್ಗಮಿಸಿದರು ಎನ್ನಲಾಗಿದೆ. ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ಜೊತೆ ಮಾತುಕತೆ ನಡೆಸುವಂತೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಸಿಪಿ ಯೋಗೀಶ್ವರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ರೇಸ್ ಕೋರ್ಸ್ ನಿವಾಸದಲ್ಲಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಈ ಕುರಿತು ಅಮಿತ್ ಶಾ ಜೊತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಬೊಮ್ಮಾಯಿ ಮುಂದೆ ಜಾರಕಿಹೊಳಿ ಹಾಗು ಸಿಪಿ ಯೋಗೀಶ್ವರ್ ಒತ್ತಡ ಹಾಕಿದ್ದರು. ಇಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಮಾತುಕತೆ ನಡೆಯಿತು. ಆದರೆ, ಅಮಿತ್ ಶಾ ಮಾತುಕತೆಗೆ ಸಿದ್ದರಿಲ್ಲ, ಅವರು ಈ ಬಗ್ಗೆ ಸೂಚನೆ ನೀಡುವುದಾಗಿ ಈಗಾಗಲೇ ತಿಳಿಸಿದ್ದಾರೆ ಹಾಗಾಗಿ ಮತ್ತೊಮ್ಮೆ ಈಗ ಮಾತನಾಡಲು ಸಾಧ್ಯವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರೂ ಜಾರಕಿಹೊಳಿ ಪಟ್ಟು ಸಡಿಲಿಸಲಿಲ್ಲ.
ಅನ್ಯಮಾರ್ಗವಿಲ್ಲದೇ ಶಾ ಭೇಟಿ ಮಾಡಿದ ಸಿಎಂ:ಕಡೆಗೆ ಜಾರಕಿಹೊಳಿಯನ್ನು ಕರೆದುಕೊಂಡೇ ಎಲ್ಲ ನಾಯಕರು ಸಿಎಂ ಅಧಿಕೃತ ನಿವಾಸದ ಪಕ್ಕದಲ್ಲೇ ಇರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ತೆರಳಿದರು. ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರು. ಆದರೆ, ಅಮಿತ್ ಶಾರ ಅವರಿಗೆ ಸಮಯ ಸಿಗಲಿಲ್ಲ. 10.20 ರಿಂದ 11.20ರವರೆಗೂ ಕಾದು ಕುಳಿತ ನಾಯಕರು ಹೋಟೆಲ್ ನಲ್ಲಿ ತಮ್ಮ ತಮ್ಮಲ್ಲೇ ಕೆಲಕಾಲ ರಾಜಕೀಯ ವಿಷಯಗಳ ಕುರಿತು ಚರ್ಚಿಸಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಸಂದೇಶ ನೀಡುವುದಾಗಿ ಈಗಾಗಲೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮತ್ತೆ ಅದರ ಬಗ್ಗೆ ಚರ್ಚೆ ಕಷ್ಟಸಾಧ್ಯ ಎನ್ನುವುದನ್ನು ಜಾರಕಿಹೊಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ನಡೆಸಲಾಯಿತು.
ಒಂದು ಗಂಟೆ ಹೋಟೆಲ್ನಲ್ಲೇ ಉಳಿದ ಶಾ:10.20 ಕ್ಕೆ ದೇವನಹಳ್ಳಿ ಕಾರ್ಯಕ್ರಮಕ್ಕೆ ಹೊರಡಬೇಕಿದ್ದರೂ 11.20ರವರೆಗೂ ಅಮಿತ್ ಶಾ ಹೋಟೆಲ್ ನಲ್ಲಿಯೇ ಇದ್ದು, ತಮ್ಮದೇ ಆದ ಕಾರ್ಯತಂತ್ರವನ್ನು ಹೆಣೆಯುವುದರಲ್ಲಿ ಮಗ್ನರಾಗಿದ್ದರು. ನಂತರ 11.20ಕ್ಕೆ ತಮ್ಮ ಕೊಠಡಿಯಿಂದ ಸಿದ್ದರಾಗಿ ಹೊರಬಂದರು. ಈ ವೇಳೆ, ರಾಜ್ಯದ ನಾಯಕರು ಒಟ್ಟಾಗಿ ನಿಂತಿರುವುದನ್ನು ಗಮನಿಸಿ ಅವರ ಸಮೀಪಕ್ಕೆ ತೆರಳಿದರು. ಈ ವೇಳೆ ರಮೇಶ್ ಜಾರಕಿಹೊಳಿಯವರನ್ನು ಅಮಿತ್ ಶಾ ಎದುರು ಭೇಟಿ ಮಾಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಸಚಿವ ಸಂಪುಟಕ್ಕೆ ನಡೆಯುತ್ತಿರುವ ಒತ್ತಡವನ್ನು ಪ್ರಸ್ತಾಪಿಸುವ ಜಾಣ ನಡೆ ಇರಿಸಿದರು.
ಆದರೆ ಜಾರಕಿಹೊಳಿ ಜೊತೆ ಯಾವುದೇ ಮಾತುಕತೆ ನಡೆಸದ ಅಮಿತ್ ಶಾ, ಎಲ್ಲ ನಾಯಕರ ಜೊತೆ ಅಲ್ಲಿಂದ ದೇವನಹಳ್ಳಿ ಕಾರ್ಯಕ್ರಮಕ್ಕೆ ತೆರಳಿದರು. ಇಂದಿನ ಭೇಟಿ ವೇಳೆ ಅಮಿತ್ ಶಾ ಕಡೆಯಿಂದ ಏನಾದರೂ ಸ್ಪಷ್ಟ ಭರವಸೆ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಜಾರಕಿಹೊಳಿಗೆ ನಿರಾಸೆಯಾಗಿದ್ದು, ಹೋಟೆಲ್ ನಿಂದ ಬೇಸರದಲ್ಲಿ ಹಿಂಬಾಗಿಲ ದ್ವಾರದ ಮೂಲಕವೇ ನಿರ್ಗಮಿಸಿ ಸದಾಶಿವನಗರದ ನಿವಾಸಕ್ಕೆ ತೆರಳಿದರು.
ಇದನ್ನು ಓದಿ:ಸಚಿವ ಸ್ಥಾನಕ್ಕಾಗಿ ಸಿಎಂ ದುಂಬಾಲು ಬಿದ್ದ ಜಾರಕಿಹೊಳಿ, ಯೋಗೇಶ್ವರ್: ಅಮಿತ್ ಶಾ ಭೇಟಿ ಮಾಡಿದ ರಾಜ್ಯ ನಾಯಕರು