ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರದಲ್ಲಿ ಎಲ್ಲಾ ಪ್ರಾರಂಭಿಕ ಹಂತದಲ್ಲಿ ನಡೆಯುತ್ತಿರುವ ಚರ್ಚೆ ಮಾತ್ರ. ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು ಭೇಟಿ ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಜೊತೆ ಸುಮಾರು ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಗ್ಯದ ಕಡೆ ನನ್ನ ಗಮನ ಇದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ಗಮನಿಸಿದ್ದೇನೆ. ಅವರು ನಮ್ಮ ಪಕ್ಷ, ದೇವೇಗೌಡರು ಹಾಗೂ ನನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಮೈತ್ರಿ ಯಾರಿಗೆ ಯಾರೂ ಅನಿವಾರ್ಯ ಇಲ್ಲ. ಬಿಜೆಪಿಗೂ ಅನಿವಾರ್ಯ ಇಲ್ಲ, ನಮಗೂ ಅನಿವಾರ್ಯತೆ ಇಲ್ಲ ಎಂದರು.
ಇಲ್ಲಿ ಕೊಟ್ಟು ತೆಗೆದುಕೊಳ್ಳುವುದು ಅಲ್ಲ, ವಿಶ್ವಾಸ ಗೌರವ ಮುಖ್ಯ. ಗೌರವ, ವಿಶ್ವಾಸವನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಈಗಿನ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿರುವುದು ಅಷ್ಟೇ. ನಾಳೆ ಕಾರ್ಯಕರ್ತರ ಸಭೆ ಮಾಡಲು ದೇವೇಗೌಡರು ಮೊದಲೇ ಹೇಳಿದ್ದರು. ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಲ್ವಾ?. ಎಲ್ಲದಕ್ಕೂ ಉತ್ತರ ಕೊಡುವ ಕಾಲ ದೂರ ಇದೆ ಎಂದು ಹೇಳಿದರು.
ಯಾವುದೇ ರಾಜಕಾರಣಿಗೂ ಹತಾಶೆ ಎಂಬುದು ಬರಲ್ಲ. ಇಲ್ಲಿ ಹತಾಶೆ ಆಗುವುದು ಕಾಂಗ್ರೆಸ್ಗೆ. ಶೇಕ್ ಆಗಿರುವುದು ಕಾಂಗ್ರೆಸ್ನವರು. ಕಾಂಗ್ರೆಸ್ನವರ ಶಕ್ತಿ ಏನಿದೆ ಅಂತಾ ನನಗೆ ಗೊತ್ತಿದೆ. ಲೂಟಿ ಮಾಡಿದ ಹಣದಲ್ಲಿ ಮತ್ತೆ ಜನರನ್ನು ಕೊಂಡುಕೊಳ್ಳಲು ಯೋಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಆಡಳಿತದಲ್ಲಿ ಎರಡೇ ತಿಂಗಳಿಗೆ ಜನ ವಿರೋಧಿ ಅಲೆ ಕಾಣುತ್ತಿದೆ. ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಕುರಿತ ಹೇಳಿಕೆಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಸೂಕ್ತ. ಒಬ್ಬ ನಾಯಕರು ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಅಂತಾ ಹೇಳಿದ್ದಾರೆ. 2018ರಲ್ಲಿ ಯಾವ ನಾಯಿ ಹಸಿದು ಹುಡುಕಿಕೊಂಡು ಬಂದಿತ್ತು, ಯಾವ ಅನ್ನ ಹಳಸಿತ್ತು ಅಂತಾ ಜ್ಞಾಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ದೆಹಲಿಗೆ ಹೋಗುವುದು ಇನ್ನೂ ಸಮಯ ನಿಗದಿಯಾಗಿಲ್ಲ. ದೇವೇಗೌಡರು ಒಪ್ಪಿದ್ದಾರೋ, ಒಪ್ಪಿಲ್ಲವೋ ಎಂಬುದು ಮುಂದೆ ಗೊತ್ತಾಗುತ್ತದೆ. ಹೊಂದಾಣಿಕೆ ಆಗಲು ಇನ್ನೂ ಬಹಳ ಸಮಯವಿದೆ, ಇನ್ನೂ ಹಲವು ಚರ್ಚೆ ಆಗಬೇಕಿದೆ ಎಂದು ಹೇಳಿದರು. ನಾನು ಇಂದು ದೊಡ್ಡವರ ಜೊತೆ ರಾಜಕೀಯ ಮಾತಾಡಲು ಬಂದಿಲ್ಲ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಸಾದ ತೆಗೆದುಕೊಂಡು ಹೋಗಲು ತಂಗಿ ಕರೆದಿದ್ದಳು ಅದಕ್ಕೆ ಬಂದಿದ್ದೆ ಎಂದರು.
ದೇವೇಗೌಡರ ಜೊತೆ ಚರ್ಚೆ : ಪೂಜೆ ಮುಗಿಸಿದ ನಂತರ ಪದ್ಮನಾಭನಗರದ ಗೌಡರ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರು ಕೆಲ ಸಮಯ ತಂದೆ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಜೊತೆ ಮೈತ್ರಿ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕುಮಾರಸ್ವಾಮಿ ಹಾಗೂ ದೇವೇಗೌಡರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಜೊತೆಗೆ ನಾಳೆ ನಡೆಯಲಿರುವ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು, ನಿನ್ನೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ, ಬಿಜೆಪಿ ಮೂಲಗಳ ಪ್ರಕಾರ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ರಾಜ್ಯದ ಬಹುತೇಕ ಬಿಜೆಪಿ ನಾಯಕರಿಗೆ ಸ್ಪಷ್ಟತೆಯಿಲ್ಲ ಎಂದು ತಿಳಿದುಬಂದಿದೆ.
ಇನ್ನು ಲೋಕಸಭೆ ಚುನಾವಣೆ ಮೈತ್ರಿ ಕುರಿತು ಬಿಜೆಪಿ ನಾಯಕರು ಸುಳಿವು ನೀಡಿದರೂ ಜೆಡಿಎಸ್ ನಾಯಕರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ನನಗೆ ಮೈತ್ರಿ ಬಗ್ಗೆ ಏನು ಗೊತ್ತಿಲ್ಲ ಎಂದಿದ್ದಾರೆ. ಪಕ್ಷದ ಅಧ್ಯಕ್ಷ ಸಿ ಎಂ ಇಬ್ರಾಹಿಂ, ಮೈತ್ರಿ ವಿಚಾರದ ಬಗ್ಗೆ ರಾಷ್ಟ್ರೀಯ ನಾಯಕ ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ಮಾಡುತ್ತಾರೆ. ಸದ್ಯ ಬಿಜೆಪಿ ನಾಯಕರು ಅಭಿಪ್ರಾಯ ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮಾತನಾಡುತ್ತೇನೆ ಎಂದಿದ್ದಾರೆ.
ಓದಿ:'ಲೋಕ' ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ... 'ದಳ'ಕ್ಕೆ ಸಿಗಲಿರುವ 4 ಕ್ಷೇತ್ರಗಳು ಯಾವುವು?