ಬೆಂಗಳೂರು : ಮುಖ್ಯಮಂತ್ರಿಗಳು ಅಮೆರಿಕಾ ಪ್ರವಾಸಕ್ಕೆ ಹೋಗಿರುವುದರಲ್ಲಿ ಏನೂ ತಪ್ಪು ಕಾಣಿಸುತ್ತಿಲ್ಲ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ, ಸಿಎಂ ವಿದೇಶಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸಂಬಂಧ ಬಿಜೆಪಿ ಆರೋಪವನ್ನು ನಾನು ಒಪ್ಪಲ್ಲ. ಸಿಎಂ ಅಮೆರಿಕಕ್ಕೆ ಹೋಗಿರೋದು ಅವರ ಒಕ್ಕಲಿಗರ ಸಮುದಾಯದ ಗುಡಿಯ ಅಡಿಗಲ್ಲು ಹಾಕಲು. ಅವರ ಜತೆಗೆ ಅಲ್ಲಿಗೆ ಸ್ವಾಮೀಜಿಗಳೂ ಹೋಗಿದ್ದಾರೆ. ಆದ್ದರಿಂದ ಇದರಲ್ಲಿ ನನಗೇನೂ ತಪ್ಪು ಕಾಣಿಸುತ್ತಿಲ್ಲ. ಅವರು ಅಲ್ಲಿಗೆ ಹೋದ್ರೆ, ಸರ್ಕಾರ ನಿಲ್ಲಲ್ಲ. ನಾವು ಇಲ್ಲೇ ಇದ್ದು, ಕೆಲಸ ಮಾಡುತ್ತಿದ್ದೇವಲ್ಲಾ ಎಂದು ಮರು ಪ್ರಶ್ನಿಸಿದರು.
ಬರ ನಿರ್ವಹಣೆ ಕೇವಲ ಆಡಳಿತ ಪಕ್ಷದ ಜವಾಬ್ದಾರಿ ಮಾತ್ರವಲ್ಲ. ವಿರೋಧ ಪಕ್ಷದವರಿಗೂ ಜವಾಬ್ದಾರಿ ಇದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಬಿಜೆಪಿಗೆ ಟಾಂಗ್ ನೀಡಿದರು.
ಸಚಿವ ಆರ್ ವಿ ದೇಶಪಾಂಡೆ ಸುದ್ದಿಗೋಷ್ಠಿ ಬರ ನಿರ್ವಹಣೆಯಲ್ಲಿ ಸರ್ಕಾರ ವೈಫಲ್ಯ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷಕ್ಕೆ ವಿಪಕ್ಷದವರೂ ಸಲಹೆ ಕೊಡಲಿ. ಅವರ ಸಲಹೆಗಳನ್ನು ನಾವು ಸ್ವೀಕರಿಸುತ್ತೇವೆ ಎಂದು ತಿಳಿಸಿದರು. ಸರ್ಕಾರ ಅದಾಗಿಯೇ ಬಿದ್ದುಹೋಗುತ್ತದೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಎಲ್ಲರೂ ಪಕ್ಷದಲ್ಲೇ ಇದ್ದಾರೆ, ಇರುತ್ತಾರೆ. ಯಾರೂ ಬಿಜೆಪಿಗೆ ಹೋಗಲ್ಲ ಅನ್ನೋದು ನಮ್ಮ ವಿಶ್ವಾಸ ಎಂದು ಸ್ಪಷ್ಟಪಡಿಸಿದರು.
ರಜಾ ದಿನವೂ ಸಚಿವರಿಂದ ಕಡತ ವಿಲೇವಾರಿ :
ಕಡತ ವಿಲೇವಾರಿ ಸಪ್ತಾಹದ ಹಿನ್ನೆಲೆ ಕಂದಾಯ ಸಚಿವರು ಭಾನುವಾರ ವಿಧಾನಸೌಧಕ್ಕೆ ಆಗಮಿಸಿ ಕಡತ ವಿಲೇವಾರಿ ಮಾಡಿದರು. ರಜಾ ದಿನವಾದರೂ ರಾಜ್ಯಾದ್ಯಂತ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಿ, ಕಡತ ವಿಲೇವಾರಿ ಮಾಡಿದರು.
ನಾನು ಯಾವುದೇ ಇಲಾಖೆಯಲ್ಲಿದ್ರೂ ಕಡತ ವಿಲೇವಾರಿ ಸಪ್ತಾಹ ಮಾಡುತ್ತೇನೆ. ಈಗಲೂ ಕಡತ ವಿಲೇವಾರಿ ಮಾಡ್ತಿದ್ದೇನೆ. ಜನರ ಕೆಲಸಗಳು ಬೇಗನೇ ಇತ್ಯರ್ಥ ಆಗಬೇಕು. ಬಹಳಷ್ಟು ಫೈಲ್‌ಗಳು ಇಲಾಖೆಯಲ್ಲಿ ವಿಲೇವಾರಿಗೆ ಬಾಕಿ ಇವೆ ಎಂದು ಸಚಿವ ಆರ್ ವಿ ದೇಶಪಾಂಡೆ ವಿವರಿಸಿದರು.