ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೆಲ್ಲಾ ಕಂಡಿದ್ದೇವೆ, ಅದನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ಟೀಕಿಸಿದರು. ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಭಾಷಣವನ್ನು ಭಾಗಶಃ ಒಪ್ಪುತ್ತೇನೆ. ವಿವಾಹ ಸಂದರ್ಭದಲ್ಲಿ ಪುರೋಹಿತರು ಕೇಳಿದ್ದರು, ಸೂರ್ಯನನ್ನು ಕಂಡೆಯಾ? ಚಂದ್ರನ್ನು ಕಂಡೆಯಾ? ನಕ್ಷತ್ರವನ್ನು ಕಂಡೆಯಾ? ಹೊನ್ನಿನಂತ ಹೆಂಡತಿಯನ್ನು ಕಂಡೆಯಾ? ಅಂತ. ಮೊದಲ ಮೂರಕ್ಕೆ ಹೌದು ಎಂದವನು ನಾಲ್ಕನೇಯದಕ್ಕೂ ಹೌದೆನ್ನಬೇಕು ಎಂದು ವ್ಯಂಗ್ಯವಾಡಿದರು.
ಹೊಗಳುವ ಅಂಶ ಏನೂ ಇಲ್ಲ:ಛತ್ರದ ಒಳಗೆ ನನ್ನ ಮದುವೆ ನಡೆದದ್ದು, ಆಗ ತೆಳುವಾದ ಪಂಚೆ ಅಡ್ಡ ಹಿಡಿದು ಇನ್ನೊಂದು ಕಡೆ ಇದ್ದ ಪತ್ನಿಯ ಮುಖ ಕಂಡೆಯಾ ಅಂತ ಪುರೋಹಿತರು ಕೇಳಿದಾಗ ಕಂಡೆ ಎನ್ನಲೇಬೇಕಾಯಿತು. ಅದೇ ರೀತಿ ರಾಜ್ಯಪಾಲರ ಬಜೆಟ್ ಬಗ್ಗೆಯು ಹೇಳಬೇಕಿದೆ. ಬಜೆಟ್ ಬಗ್ಗೆ ಪ್ರತಿಪಕ್ಷದವರು ಒಳ್ಳೆಯ ಮಾತಾಡಬೇಕು ಎಂದು ಆಯನೂರು ಮಂಜುನಾಥ್ ಅವರು ಹೇಳಿದ್ದರು. ಸಾಕಷ್ಟು ಪ್ರಯತ್ನ ಮಾಡಿದೆ, ಆದರೆ ಹೊಗಳುವ ಅಂಶ ಏನೂ ಇಲ್ಲ ಎಂದು ಹೇಳಿದರು.
ಅಂಬಾನಿ, ಅದಾನಿ ಕೈಗೆ ದೇಶ ಕೊಟ್ಟು ಕುಳಿತಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ. ಕೈಗಾರಿಕೋದ್ಯಮಿಗಳ ಕೈಗೆ ದೇಶ ಬಿಟ್ಟರೆ ಅಭಿವೃದ್ಧಿ ಸಾಧ್ಯವಾ? ಗೌತಮ್ ಅದಾನಿ ಕಂಪನಿ ನಷ್ಟ ದೇಶದ ಸಂಪತ್ತು ನಾಶವಾಗಿದೆ. ದೇಶದ ಜನ ಹೂಡಿಕೆ ಮಾಡಿದ್ದ ಹಣ ಹೋಗಿದೆಯಲ್ಲಾ. ನೀರವ್ ಮೋದಿ, ವಿಜಯ್ ಮಲ್ಯ ದೇಶದ ಸಂಪತ್ತು ಲೂಟಿ ಮಾಡಿ ದೇಶ ಬಿಟ್ಟು ಓಡಿ ಹೋದರು. ಈಗ ಅದಾನಿ ಸಹ ಅದೇ ಕೆಲಸ ಮಾಡುವ ಮುನ್ನ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರುತ್ತಿಲ್ಲ:ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆತಂದಿದ್ದು ಒಳ್ಳೆ ವಿಚಾರ, ಆದರೆ ಪ್ರಶಂಸೆಗೆ ಅರ್ಹವಲ್ಲ. ಅಲ್ಲಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗಿದೆ ಗೊತ್ತಾ? ಅವರಿಗೆ ಶಿಕ್ಷಣದ ಜವಾಬ್ದಾರಿ ವಹಿಸುತ್ತೇವೆ ಎಂದಿರಿ. ಕರೆತಂದು ಬಿಟ್ಟಿರಿ ಆಮೇಲೆ ಯಾವುದೇ ಸಹಾಯ ಮಾಡಿಲ್ಲ. ರೈತರಿಗೆ ನಾವು 12 ಸಾವಿರ ಕೋಟಿ ರೂ. ನೀಡಿದ್ದೆವು, ಈ ಸಾರಿ 11 ಸಾವಿರ ಕೋಟಿ ರೂ. ನೀಡಿದ್ದಾರೆ. ಇಂತವರನ್ನು ಹೇಗೆ ಹೊಗಳೋಣ? ಪ್ರಾಥಮಿಕ ಶಾಲೆಗಳ ಸ್ಥಿತಿ ಮಲೆನಾಡು ಭಾಗದಲ್ಲಿ ಏನಾಗಿದೆ ಅಂತ ಗೊತ್ತು.
ಈ ವರ್ಷ ಸರ್ಕಾರ ನೆರವಿಗೆ ಬಂದಿದೆ. ಹಿಂದೆ ಕಂಡಿರಲಿಲ್ಲವಾ? ಪ್ರಶಂಸೆ ಮಾಡುವ ಅಂಶ ಸರ್ಕಾರದಲ್ಲಿ ಏನೂ ಇಲ್ಲ. ಹಾಗಾಗಿ ಹೊಗಳಲ್ಲ. ಜಲಜೀವನ್ ಮಿಷನ್ ಗೆ ಹತ್ತು ಗಡುವು ನೀಡಿದ್ದರೂ ಯಶಸ್ಸು ಆಗಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಯಾಕೆ ರಾಜ್ಯದಲ್ಲಿ ಯಶಸ್ವಿ ಆಗುತ್ತಿಲ್ಲ? ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರುತ್ತಿಲ್ಲ. ಜನರು, ರೈತರಿಗೆ ಭರವಸೆ ನೀಡುವ ಕಾರ್ಯ ಮಾಡಬೇಕು ಎಂದರು.
ಆಡಳಿತ ಪಕ್ಷ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು:ಕೋವಿಡ್ ಸಂದರ್ಭದಲ್ಲಿ ಹಳ್ಳಿಗೆ ತೆರಳಿ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡಿ ಭವಿಷ್ಯ ರೂಪಿಸಿಕೊಂಡವರು ವಾಪಸ್ ಬಂದಿಲ್ಲ. ಈಗ ಊರಲ್ಲಿರುವ ಆ ಯುವಕರಿಗೆ ಇನ್ನಷ್ಟು ಸವಲತ್ತು ಕೊಡಬೇಕು. ಅಡಿಕೆ ಎಲೆಚುಕ್ಕಿ ರೋಗ ವಿಸ್ತರಿಸದಂತೆ ತಡೆಯಬೇಕು. ಕಾಫಿ ಬೆಳೆಗಾರರ ಸಮಸ್ಯೆ ಶೋಚನೀಯ. ಪ್ರಕೃತಿ ವಿಕೋಪ ಸಂದರ್ಭ ಅಪಾಯಕ್ಕೆ ಒಳಗಾಗಿರುವ ಸಣ್ಣ ರೈತರಿಗೆ ಸಹಾಯ ಮಾಡಿ. ಕಾಫಿ ಬೆಳೆದು ತಮ್ಮ ಬದುಕು ಕಟ್ಟಿಕೊಂಡವರು, ನಮ್ಮನ್ನು ಪೋಷಿಸುತ್ತಿರುವ ಕಾಫಿ ಬೆಳೆಗಾರರ ಸಹಾಯಕ್ಕೆ ಬರಬೇಕು. ಕೊಬ್ಬರಿ ಬೆಳೆ ಕುಸಿದಿದೆ. ತೆಂಗು ಬೆಳೆಗಾರರ ಸಹಾಯಕ್ಕೆ ಬರಬೇಕು. ಶಿಕ್ಷಣ, ಆರೋಗ್ಯ ಹಾಗೂ ರೈತರ ವಿಚಾರ ಬಂದಾಗ ಸರ್ಕಾರ ನಿರ್ಲಕ್ಷ್ಯ ಮಾಡುವುದು ಬೇಡ. ಶಿಗ್ಗಾವಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯ ಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕೋವಿಡ್ ಹೆಸರಲ್ಲಿ ಭ್ರಷ್ಟಾಚಾರ ಆಗಿದೆ. ಆಡಳಿತ ಪಕ್ಷ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಟೀಕಿಸಿದರು.
ತಮಗೆ ಬರಬೇಕಾದ ಪಾಲನ್ನು ಕೇಳಲು ಹಿಂಜರಿಯುತ್ತಿದೆ:ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ದೇಶದ ಶೇ1 ಜನ ಒಟ್ಟು ಶೇ 60 ರಷ್ಟು ಸಂಪತ್ತನ್ನು ಒಳಗೊಂಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದಿಂದ ತಮಗೆ ಬರಬೇಕಾದ ಪಾಲನ್ನು ಕೇಳಲು ಹಿಂಜರಿಯುತ್ತಿದೆ. ಇಂದು ರಾಜಕೀಯ ಅಧಿಕಾರದಲ್ಲಿ ಉಳಿದುಕೊಳ್ಳುವುದಕ್ಕಾಗಿ ಬಳಸುತ್ತಿದ್ದೇವೆ? ಇದಕ್ಕೆ ಬಿಬಿಸಿ ಮೇಲಿನ ಐಟಿ ದಾಳಿ ಸಾಕ್ಷಿ. ಜನ ನಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಅನ್ನುವುದನ್ನು ನೋಡಿ. ಶಾಲಾ ಮಕ್ಕಳಿಗೆ ಎರಡು ಜೊತೆ ಬಟ್ಟೆ ಕೊಡಲು ಸಾಧ್ಯವಿಲ್ಲವಾ ಅಂತ ಹೈಕೋರ್ಟ್ ಕೇಳುತ್ತಿದೆ ಎಂದರು.
ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿದ್ದ ದಿವ್ಯಾ ಹಾಗರಿಗೆ ಜಾಮೀನು ಸಿಗತ್ತೆ, ಅದೇ ಎಡಿಜಿಪಿ ಅಮೃತ್ ಪೌಲ್ ಈಗಲೂ ಜೈಲಲ್ಲಿದ್ದಾರೆ. ಅವರು ಚುನಾವಣೆ ಮುಗಿಯುವವರೆಗೂ ಒಳಗೇ ಇರುತ್ತಾರೆ. ಗುಜರಾತ್ ನಲ್ಲಿ ಸಹ ಇದೇ ಆಗಿದೆ. ಅಲ್ಲಿ ಅಧಿಕಾರಿ ಸಂಜೀವ್ ಭಟ್ ಈಗಲೂ ಜೈಲಲ್ಲಿದ್ದಾರೆ. ಮತದಾರರ ಗುರುತಿನ ಚೀಟಿ ಮಾಹಿತಿ ಕಲೆ ಹಾಕಲು ಚಿಲುಮೆ ಸಂಸ್ಥೆಗೆ ಗುತ್ತಿಗೆ ನೀಡಿದಿರಿ. ಸರ್ಕಾರಿ ಅಧಿಕಾರಿ ಹೆಸರಲ್ಲಿ ಯಾರೋ ವ್ಯಕ್ತಿ ಓಡಾಡಿಕೊಂಡಿದ್ದ. ಇದರ ತನಿಖಾ ವರದಿ ಏನಾಗಿದೆ? ಮಾದಕ ವಸ್ತುಗಳ ವ್ಯಸನದಿಂದ ಯುವಕರ ಬದುಕು ಹಾಳಾಗುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿಲ್ಲ. ನಗರ ಪ್ರದೇಶದ ಎಲ್ಲೆಡೆ ಹರಡುತ್ತಿದೆ. ಸರಿಯಾದ ಕ್ರಮ ಕೈಗೊಂಡಿಲ್ಲ ಎಂದರೆ ಸರ್ಕಾರ ಇದ್ದೇನು ಪ್ರಯೋಜನ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ವಿಧಾನಸಭೆ ಅಧಿವೇಶನ: ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಸದ್ಯಕ್ಕಿಲ್ಲ: ಬಿ.ಶ್ರೀರಾಮುಲು