ಬೆಂಗಳೂರು : ಚುನಾವಣಾಧಿಕಾರಿಗಳು ಕೂಡಾ ಸರ್ಕಾರಿ ಅಧಿಕಾರಿಗಳೇ. ಯಾವ ಸಂದರ್ಭದಲ್ಲಿ ಯಾರು ಬೇಕಾದರೂ ಒತ್ತಡಕ್ಕೆ ಮಣಿದು ಏನು ಬೇಕಾದರೂ ಮಾಡಬಹುದು ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಡಿಕೆಶಿ ಸಲ್ಲಿಸಿದ್ದ ಆಸ್ತಿ ವಿವರದ ಅಫಿಡವಿಟ್ ಪತ್ರವನ್ನು ಹಲವರು ಡೌನ್ಲೋಡ್ ಮಾಡುತ್ತಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಹೇಗಾದರೂ ಮಾಡಿ ಅಡ್ಡಿ ಮಾಡಬಹುದು. ದೆಹಲಿಯಲ್ಲಿ ಕೆಲವು ಬಿಜೆಪಿಗರು ಪತ್ರಿಕಾಗೋಷ್ಠಿ ನಡೆಸಿ ಡಿಕೆಶಿಯನ್ನು ರಾಜಕೀಯವಾಗಿ ಕಟ್ಟಿ ಹಾಕಬೇಕು ಎಂದಿದ್ದಾರೆ ಎಂದು ತಿಳಿಸಿದರು.
ಜನಾಭಿಪ್ರಾಯದ ಮುಂದೆ ಬೇರೆ ಯಾರೂ ಇಲ್ಲ. ಹಾಗಾಗಿ ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಡಿಕೆಶಿ ನಾಮಪತ್ರದಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲ. ಬಿಜೆಪಿಯಿಂದ ತಂತ್ರಗಾರಿಕೆ ನಡೆಯುತ್ತಿದೆ. ಚುನಾವಣಾ ದಿನಾಂಕ ಘೋಷಣೆ ಮಾಡುವಾಗಲೂ ಸರ್ಕಾರದ ಅನುಮತಿ ಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಮುಗಿದ ಬಳಿಕ ಚುನಾವಣೆ ಘೋಷಣೆ ಆಗಿರುವುದು ನಿಮಗೆಲ್ಲ ಗೊತ್ತು ಎಂದು ಟೀಕಿಸಿದರು.
ಆರ್.ಅಶೋಕ್ ಜೊತೆ ಹೊಂದಾಣಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ದ್ವೇಷದ ರಾಜಕಾರಣ ನಾವು ಮಾಡಲ್ಲ, ನಾವು ನೇರಾನೇರಾ ರಾಜಕಾರಣ ಮಾಡುತ್ತೇವೆ. ನಮಗೆ ದ್ವೇಷದ ರಾಜಕಾರಣ ಅಗತ್ಯವಿಲ್ಲ. ಅಶೋಕ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಗತಿ ಡಿ.ಕೆ.ಶಿವಕುಮಾರ್‌ಗೆ ಬಂದಿಲ್ಲ ಎಂದು ತಿರುಗೇಟು ನೀಡಿದರು.