ಬೆಂಗಳೂರು: ಸರಣಿ ಸಭೆಗಳು ಹಾಗೂ ಸುದ್ದಿಗೋಷ್ಠಿಗಳನ್ನು ಆಯೋಜಿಸುವ ಮೂಲಕ ಚಟುವಟಿಕೆಯ ಕೇಂದ್ರವಾಗಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿ ಆತಂಕದ ತಾಣವಾಗಿ ಗುರುತಿಸಿಕೊಳ್ಳುತ್ತಿದೆ.
ಕೊರೊನಾ ದೇಶದ ಜೊತೆ ರಾಜ್ಯದಲ್ಲಿಯೂ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿರುವ ಸಂದರ್ಭ ಆಡಳಿತ ರೂಢ ಬಿಜೆಪಿ ಹಾಗೂ ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತಮ್ಮ ಕಚೇರಿಯನ್ನು ಬಂದ್ ಮಾಡಿದ್ದರೆ, ಕಾಂಗ್ರೆಸ್ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೆ ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿಸಿಕೊಂಡಿದೆ. ಕೊರೊನಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಕಚೇರಿಯನ್ನು ಬಂದ್ ಮಾಡುವುದಾಗಿ ತಿಳಿಸಿದ್ದರು. ಅಲ್ಲದೇ ಯಾವುದೇ ಸಭೆ ಸಮಾರಂಭ ಸುದ್ದಿಗೋಷ್ಠಿಗಳನ್ನು ನಡೆಸುವುದಿಲ್ಲ ಎಂದು ತಿಳಿಸಿದ್ದರು.
ಆದ್ರೆ ಪಕ್ಷದ ಕಚೇರಿಯನ್ನು ತೆರೆದಿಡುವ ಮೂಲಕ, ಮೇಲಿಂದ ಮೇಲೆ ಸಭೆ ಕರೆದು ಕಾರ್ಯಕರ್ತರನ್ನು ಗುಂಪುಗೂಡಿಸಿ ಚರ್ಚೆ ನಡೆಸುವ ಮೂಲಕ ಕಾಂಗ್ರೆಸ್ ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಸರಣಿ ಸುದ್ದಿಗೋಷ್ಠಿಗಳು ಹಾಗೂ ಇದೇ ಸಂದರ್ಭದಲ್ಲಿ ಪ್ರಮುಖ ನಾಯಕರ ಸಭೆ ನಡೆಸುತ್ತಿರುವುದರಿಂದ ಕಾಂಗ್ರೆಸ್ ಕಚೇರಿಯಲ್ಲಿ ಸಾಮಾಜಿಕ ಅಂತರಕ್ಕೆ ಬೆಲೆಯೇ ಇಲ್ಲದ ವಾತಾವರಣ ಗೋಚರಿಸುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಸಲೀಂ ಅಹ್ಮದ್, ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಮಾಜಿ ಸಚಿವ ರಾಮಲಿಂಗರೆಡ್ಡಿ ಜಮೀರ್ ಅಹಮದ್ ಖಾನ್ ಮತ್ತಿತರ ನಾಯಕರು ಸಭೆ ನಡೆಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಈ ನಾಯಕರ ಬೆಂಬಲಿಗರು ಪಾಲ್ಗೊಂಡಿದ್ದರು. ಖುದ್ದು ಡಿ.ಕೆ. ಶಿವಕುಮಾರ್, ಈಶ್ವರ್ ಖಂಡ್ರೆ ಹಾಗೂ ಸಿಎಂ ಇಬ್ರಾಹಿಂ ಸರಣಿ ಸುದ್ದಿಗೋಷ್ಠಿ ನಡೆಸಿದರು. ಇದಾದ ಬಳಿಕ ಡಿಕೆ ಶಿವಕುಮಾರ್ ವೈದ್ಯರ ಘಟಕದ ಜೊತೆ ಹಾಗೂ ರಾಮಲಿಂಗರೆಡ್ಡಿ ಬೆಂಗಳೂರು ಕಾರ್ಯಪಡೆ ಸದಸ್ಯರು ಸಭೆ ನಡೆಸಿದರು.
ರಾಜ್ಯದಲ್ಲಿಯೇ ಅತಿಹೆಚ್ಚು ಸೋಂಕಿತರು ಬೆಂಗಳೂರು ನಗರದಲ್ಲಿಯೇ ಇರುವಾಗ ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ನಡೆದುಕೊಳ್ಳುತ್ತಿರುವ ರೀತಿ ಬೇಸರ ತರಿಸುವಂತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇದು ಸೋಂಕು ಹರಡುವ ಪ್ರಮುಖ ತಾಣವಾದರೆ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ವೈರಸ್ ಸಮುದಾಯದ ಹಂತಕ್ಕೆ ತಲುಪಿಸುವ ಸಾಧ್ಯತೆಯನ್ನು ಮೈಸೂರು ಜಿಲ್ಲೆಯ ನಂಜನಗೂಡು ಔಷಧ ಕಾರ್ಖಾನೆಯ ರೋಗಿಗಳ ಸಂಪರ್ಕಿತರು ಹಾಗೂ ದಿಲ್ಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿ ವಾಪಸ್ ಆದ ವ್ಯಕ್ತಿಗಳು ಮಾಡಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗುತ್ತಿದೆ ಈ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಕಚೇರಿಯಲ್ಲಿ ಸಭೆ ಮಾಡುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ.