ಬೆಂಗಳೂರು: ರಾಜ್ಯದಲ್ಲಿ ಎರಡನೇ ಡೋಸ್ ಲಸಿಕೆ ನೀಡಲು ಲಸಿಕೆ ಕೊರತೆ ಇಲ್ಲ, ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಸಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಈ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಪೀಠಕ್ಕೆ ಮಾಹಿತಿ ನೀಡಿದ ಎಜಿ, ಮೇ 28ಕ್ಕೆ ರಾಜ್ಯದಲ್ಲಿ 3.65 ಲಕ್ಷ ಜನರಿಗೆ ಎರಡನೇ ಡೋಸ್ ಬೇಕಾಗಿದೆ. ಜೂನ್ 1ರೊಳಗೆ 4.20 ಲಕ್ಷ ಕೊವ್ಯಾಕ್ಸಿನ್ ಲಭ್ಯವಾಗಲಿದೆ. ಹೀಗಾಗಿ, ಎರಡನೇ ಡೋಸ್ ಕೊವ್ಯಾಕ್ಸಿನ್ ಕೊರತೆಯಾಗುವುದಿಲ್ಲ. ಜೊತೆಗೆ ಕೋವಿಶೀಲ್ಡ್ ದಾಸ್ತಾನು ಸಾಕಷ್ಟಿದ್ದು 18 ರಿಂದ 44 ವರ್ಷದೊಳಗಿನವರೆಗಿನ ಆದ್ಯತಾ ಗುಂಪುಗಳಿಗೆ ಮೊದಲನೇ ಡೋಸ್ ನೀಡಲಾಗುತ್ತಿದೆ ಎಂದರು.
ಇದನ್ನೂಓದಿ: ಜಿಂದಾಲ್ಗೆ ಸರ್ಕಾರಿ ಭೂಮಿ ಪರಭಾರೆ ಪ್ರಶ್ನಿಸಿ ಹೈಕೋರ್ಟ್‍ಗೆ ಪಿಐಎಲ್
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 18 ರಿಂದ 44 ವರ್ಷದೊಳಗಿನವರಿಗೆ ಸರ್ಕಾರದಿಂದ ಲಸಿಕೆ ಸಿಗುತ್ತಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ.ಗಳಿಗೆ ಲಸಿಕೆ ಸಿಗುತ್ತಿದೆ. ಹಣವಿಲ್ಲದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲಾಗುವುದಿಲ್ಲ. ಇದನ್ನು ಕೇಂದ್ರ ಸರ್ಕಾರ ಸಮಾನತೆಯ ಹಕ್ಕಿನಡಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದಿತು. ಕೇಂದ್ರದ ಪರ ಹಾಜರಿದ್ದ ಎಎಸ್ಜಿ ಐಶ್ವರ್ಯ ಭಾಟಿ ಮಾಹಿತಿ ನೀಡಿ, ಶೇ.25ರಷ್ಟನ್ನು ಮಾತ್ರ ಖಾಸಗಿ ಆಸ್ಪತ್ರೆಗಳು ಖರೀದಿಸಬಹುದು. ಕರ್ನಾಟಕದಲ್ಲಿ 85,000 ಡೋಸ್ ಮಾತ್ರ ಖಾಸಗಿ ಆಸ್ಪತ್ರೆಗಳು ಖರೀದಿಸಿವೆ. ಕೇಂದ್ರ ಸರ್ಕಾರ ಶೇ.50ರಷ್ಟು ಲಸಿಕೆ ಪೂರೈಸಿದೆ. ರಾಜ್ಯ ಸರ್ಕಾರ ಕೂಡ ಶೇ.25ರಷ್ಟು ಲಸಿಕೆಯನ್ನು ಖರೀದಿ ಮಾಡಿದೆ. ರಾಜ್ಯ ಸರ್ಕಾರಕ್ಕೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳು ಸುಮಾರು 16 ಲಕ್ಷ ಲಸಿಕೆಗಳನ್ನು ಖರೀದಿಸಿವೆ ಎಂದರು.
ಹಾಗಿದ್ದರೆ ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆಗಳು ಎಷ್ಟು ಪ್ರಮಾಣದಲ್ಲಿ ಲಸಿಕೆ ಖರೀದಿಸಿವೆ ಎಂಬ ಕುರಿತು ವಿವರ ನೀಡುವಂತೆ ಸೂಚಿಸಿದ ನ್ಯಾಯಾಲಯ, ವಿಚಾರಣೆ ಮುಂದೂಡಿತು.