ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಆದರೂ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿರುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ ಸಚಿವ ಚವ್ಹಾಣ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹಕ್ಕಿ ಜ್ವರದ ಬಗ್ಗೆ ತೀವ್ರವಾಗಿ ನಿಗಾವಹಿಸಲು ಸೂಚನೆ ನೀಡಿದರು.
ಸಾರ್ವಜನಿಕರು ಆತಂಕ ಪಡದೆ ಮೊಟ್ಟೆ ಮತ್ತು ಮಾಂಸ ಸೇವಿಸಬಹುದಾಗಿದೆ. ಕೇರಳ ರಾಜ್ಯವನ್ನು ಹೊರತುಪಡಿಸಿ ಇತರೆ ರಾಜ್ಯಗಳಿಗೆ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಕೇರಳ ರಾಜ್ಯದಿಂದ ಒಳಬರುವ ಕೋಳಿ/ಕುಕ್ಕುಟ, ಕೋಳಿ ಉತ್ಪನ್ನಗಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಗಡಿ ಭಾಗದಲ್ಲಿ ಹೈಅಲರ್ಟ್ :ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳು ಹಾಗೂ ಇತರೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋಳಿ ಶೀತ ಜ್ವರದ ರೋಗೋದ್ರೇಕ ತಡೆಗಟ್ಟಲು, ರೋಗ ನಿಯಂತ್ರಣ ಸಮಿತಿ ಸಭೆಗಳನ್ನು ಜರುಗಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಲಾಗಿದೆ.
ಎಲ್ಲಾ ಕೋಳಿ ಫಾರಂಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೋಗ ನಿಯಂತ್ರಣ ಔಷಧಿಗಳಿಂದ ಸ್ವಚ್ಛಗೊಳಿಸುವುದು ಮತ್ತು ಕನಿಷ್ಠ ಜೈವಿಕ ರಕ್ಷಣಾ ಪದ್ದತಿಗಳನ್ನು ಅಳವಡಿಕೊಳ್ಳುವಂತೆ ತೀರ್ಮಾನಿಸಿ ಕ್ರಮವಹಿಸುವಂತೆ ತಿಳಿಸಲಾಗಿದೆ.
ಕೇರಳ ರಾಜ್ಯದ ಗಡಿ ಭಾಗದ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಾಡು ಹಕ್ಕಿಗಳು/ನೀರು ಹಕ್ಕಿಗಳು/ವಲಸೆ ಹಕ್ಕಿಗಳು/ ಬಾತುಕೋಳಿಗಳು/ಗೀಜಗದ ಹಕ್ಕಿಗಳು ಇತ್ಯಾದಿ ವಿವಿಧ ಪ್ರಭೇದದ ಹಕ್ಕಿಗಳ ಅಸಹಜ ಸಾವು ಅಥವಾ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಗಮನಹರಿಸಿ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅವಶ್ಯವಿರುವ ಪರಿಕರಗಳು ಮತ್ತು ರೋಗ ನಿಯಂತ್ರಕ ರಾಸಾಯನಿಕಗಳನ್ನು ಕ್ರೋಢೀಕರಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಲು ಸೂಚನೆ ನೀಡಲಾಗಿದೆ.