ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಶಿಫಾರಸು ಪತ್ರಗಳನ್ನು ಯಾವ ರೀತಿ ಪರಿಗಣಿಸಲಾಗುತ್ತಿದೆ ಎಂಬುದನ್ನು ಸ್ಪಷ್ಪಪಡಿಸಿ ಆ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ನೇಮಕಾತಿ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ.
ಪೊಲೀಸ್ ವರ್ಗಾವಣೆಯಲ್ಲಿ ರಾಜಕಾರಣಿಗಳ ಶಿಫಾರಸು ಪತ್ರಕ್ಕಿಲ್ಲ ಕಿಮ್ಮತ್ತು - Public interest petition
ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘಿಸಿ ಈ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ನಿಯಮ ಬಾಹಿರವಾಗಿ ಶಿಫಾರಸು ಮಾಡದ ಕುರಿತು ಸ್ಪಷ್ಟನೆ ಕೇಳಿದ ಹೈಕೋರ್ಟ್.
ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘಿಸಿ ಈ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ನಿಯಮ ಬಾಹಿರವಾಗಿ ಶಿಫಾರಸು ಮಾಡಲಾಗಿದೆ. ಹೀಗೆ ಶಿಫಾರಸು ಮಾಡಿರುವ 24 ಜನಪ್ರತಿನಿಧಿಗಳ ವಿರುದ್ಧ ವಿಶೇಷ ತನಿಖೆ ನಡೆಸಬೇಕೆಂದು ಕೋರಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಈ ಕುರಿತು ಸ್ಪಷ್ಪನೆ ನೀಡುವಂತೆ ತಿಳಿಸಿದೆ.
ಕಳೆದ ಡಿ.18ರಂದು ನಡೆಸಿದ್ದ ವಿಚಾರಣೆ ಸಂದರ್ಭದಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಸರ್ಕಾರ, 'ಶಿಫಾರಸು ಪತ್ರಗಳನ್ನು ಪರಿಗಣಿಸದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಇನ್ನು ಮುಂದೆ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ಹೀಗಾಗಿಯೇ ರಾಜಕಾರಣಿಗಳ ಶಿಫಾರಸು ಪತ್ರಗಳನ್ನು ಪರಿಶೀಲಿಸಿ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಅವುಗಳನ್ನು ಪರಿಗಣಿಸುವ ಸಂಬಂಧ ಪೊಲೀಸ್ ನೇಮಕಾತಿ ಮಂಡಳಿ ಮೇಲೆ ಯಾವುದೇ ಒತ್ತಡ ಹೇರಿಲ್ಲ’ ಎಂದು ಪ್ರಮಾಣಪತ್ರ ಸಲ್ಲಿಸಿತ್ತು.