ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಅಂದರೆ 2020-21ರಲ್ಲಿ ರಾಜ್ಯ ಸರ್ಕಾರ ವಸತಿ ಯೋಜನೆಯಡಿ ಯಾವುದೇ ಹೊಸ ಮನೆಗಳ ಗುರಿ ನೀಡಿಲ್ಲ. ಸರ್ಕಾರ ವಿವಿಧ ವಸತಿ ಯೋಜನೆಗಳಡಿ ಪ್ರತಿ ವರ್ಷ ಆಯವ್ಯಯದಲ್ಲಿ ನಿಗದಿಪಡಿಸುವ ಅನುದಾನಕ್ಕೆ ಅನುಗುಣವಾಗಿ ಗ್ರಾಮ ಪಂಚಾಯಿತಿವಾರು, ಸ್ಥಳೀಯ ಸಂಸ್ಥೆಗಳವಾರು ಮನೆಗಳ ಗುರಿ ನಿಗದಿಪಡಿಸಿ ಗ್ರಾಮ ಸಭೆ/ ಆಶ್ರಯ ಸಮಿತಿಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುತ್ತದೆ.
ವಿವಿಧ ವಸತಿ ಯೋಜನೆಗಳಾದ ಬಸವ ವಸತಿ, ಯೋಜನೆ ಡಾ. ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ ( ಗ್ರಾಮೀಣ ಮತ್ತು ನಗರ ), ವಾಜಪೇಯಿ ನಗರ ವಸತಿ ಯೋಜನೆ, ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ (ಗ್ರಾಮೀಣ ಮತ್ತು ನಗರ) ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) ಇವು ರಾಜ್ಯ ಸರ್ಕಾರದ ಯೋಜನೆಗಳಾಗಿವೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) ಬರುತ್ತದೆ. ಪ್ರಸಕ್ತ ಆರ್ಥಿಕ ವರ್ಷ ಆರಂಭದ ದಿನಗಳಲ್ಲಿ ಕೋವಿಡ್-19 ಮಾರಕ ಸಾಂಕ್ರಾಮಿಕ ರೋಗ ಭೀತಿ ಹಾಗೂ ನೆರೆ ಸಮಸ್ಯೆಯಿಂದಾಗಿ ಎದುರಾದ ಆರ್ಥಿಕ ಸಂಕಷ್ಟದ ಹಿನ್ನೆಲೆ ಯಾವುದೇ ಹೊಸ ಮನೆಗಳ ಗುರಿ ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ನಿವೇಶನ ಹಂಚಿಕೆ:
2020ರಲ್ಲಿ ಮನೆಗಳನ್ನು ನೀಡದಿದ್ದರೂ ನಿವೇಶನ ನೀಡುವ ಕಾರ್ಯವನ್ನು ಸರ್ಕಾರ ಮುಂದುವರಿಸಿದೆ. 2020ರ ಏಪ್ರಿಲ್ನಿಂದ ಆಗಸ್ಟ್ ತಿಂಗಳ ನಡುವೆ ಒಟ್ಟು 1,696 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ 1,309 ಹಾಗೂ ವಾಜಪೇಯಿ ನಗರ ನಿವೇಶನ ಯೋಜನೆಯಡಿ 387 ನಿವೇಶನ ಹಂಚಿಕೆ ಮಾಡಲಾಗಿದೆ.
ಫಲಾನುಭವಿಗಳ ಆಯ್ಕೆಗೆ ವಿಧಾನ ಅನುಸರಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಅರ್ಜಿದಾರರು ಕಡ್ಡಾಯವಾಗಿ ಮಹಿಳೆ ಆಗಿರಬೇಕು( ಮಾಜಿ ಯೋಧರು, ವಿಧುರರು, ವಿಶೇಷಚೇತನರು ಹಾಗೂ ಹಿರಿಯ ನಾಗರಿಕರು ಆಗಿದ್ದಲ್ಲಿ ಪುರುಷರು ಸಹ ಅರ್ಹರಾಗಿರುತ್ತಾರೆ). ಅರ್ಜಿದಾರರ ಕುಟುಂಬವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರು ಆಗಿದ್ದಲ್ಲಿ 32,000 ರೂ.ಕ್ಕಿಂತ ಕಡಿಮೆ ಇರಬೇಕು. ನಗರ ಪ್ರದೇಶದಲ್ಲಿ 87,600 ರೂ.ಗಿಂತ ಒಳಗಿರಬೇಕು. ಅರ್ಜಿದಾರರ ಕುಟುಂಬವು ವಸತಿ ರಹಿತವಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಮನೆ ಇರಬಾರದು. ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದಿಂದ ನೀಡಲಾದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ 2011ರ ಪಟ್ಟಿಯಲ್ಲಿ ಹೆಸರು ಇರಬೇಕು. ಡಾ. ಬಿ.ಆರ್.ಅಂಬೇಡ್ಕರ್ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. ಈ ವರ್ಗದ ವಸತಿರಹಿತರಿಗೆ ಬೇಡಿಕೆ ಆಧಾರಿತವಾಗಿ ವಸತಿ ಕಲ್ಪಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ.