ಕರ್ನಾಟಕ

karnataka

ETV Bharat / state

ಎರಡು ಪ್ರಕರಣಗಳಲ್ಲಿ ಶಿಕ್ಷೆಯಾದಲ್ಲಿ ಒಂದೇ ಅವಧಿಯಲ್ಲಿ ಅನುಭವಿಸಬೇಕು: ಹೈಕೋರ್ಟ್ - ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ

ಒಂದು ವೇಳೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ ಇತರೆ ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯೂ ಜೀವಾವಧಿ ಶಿಕ್ಷೆಯೊಂದಿಗೆ ಒಳಪಡುತ್ತದೆ. ಆ ಎರಡೂ ಶಿಕ್ಷೆಗಳು ಅಪರಾಧಿಗೆ ಏಕಕಾಲದಲ್ಲಿ ಜಾರಿಯಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಇದೆ ಎಂದು ಹೈಕೋರ್ಟ್‌ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

By

Published : Feb 27, 2023, 9:25 PM IST

ಬೆಂಗಳೂರು: ಕೊಲೆ ಮಾಡಿರುವ ಅಪರಾಧಿ ಜೀವಾವಧಿ ಶಿಕ್ಷೆಯೊಂದಿಗೆ ಇತರೆ ಅಪರಾಧ ಕೃತ್ಯದಲ್ಲಿ ವಿಧಿಸಿರುವ ಶಿಕ್ಷೆಯನ್ನೂ ಏಕಕಾಲದಲ್ಲಿ ಅನುಭವಿಸಬೇಕು. ಇದಕ್ಕೆ ಬದಲಾಗಿ ಇತರೆ ಅಪರಾಧಕ್ಕೆ ಪ್ರತ್ಯೇಕವಾಗಿ ಶಿಕ್ಷೆ ಅನುಭವಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ರಾಮಚಂದ್ರ ರೆಡ್ಡಿ ಮತ್ತು ಕೆ.ಆರ್.ಸುಕುಮಾರ್ ಎಂಬುವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದರೋಡೆ ನಡೆಸುವಾಗ ನೋವು ಉಂಟುಮಾಡಿದ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಅಥವಾ ಪ್ರತ್ಯೇಕವಾಗಿ ಅನುಭವಿಸಬೇಕೋ ಎಂಬುದಾಗಿ ಸ್ಪಷ್ಟಪಡಿಸಿರಲಿಲ್ಲ. ಈ ಬಗ್ಗೆ ಅವರು ಸ್ಪಷ್ಟನೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಎರಡೂ ಶಿಕ್ಷೆಗಳ ಅವಧಿಯನ್ನು ಏಕಕಾಲಕ್ಕೆ ಅನುಭವಿಸಬೇಕು ಎಂದು ಸ್ಪಷ್ಟನೆ ನೀಡಿತು. ಹೀಗಾಗಿ ಕಳೆದ 22 ವರ್ಷದಿಂದ ಜೈಲು ವಾಸದಲ್ಲಿದ್ದ ಇಬ್ಬರೂ ಅಪರಾಧಿಗಳು ಕ್ಷಮದಾನ ಅಥವಾ ಅವಧಿಪೂರ್ವ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಸೂಚನೆ ನೀಡಿದೆ.

ಅಲ್ಲದೇ, ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಎರಡು ಪ್ರತ್ಯೇಕ ಅಪರಾಧಗಳ ಸಂಬಂಧ ಶಿಕ್ಷೆ ವಿಧಿಸಲಾಗಿದೆ. ವಿಧಿಸಿರುವ ಶಿಕ್ಷೆಯ ಪೈಕಿ ಜೀವಾವಧಿ ಶಿಕ್ಷೆಯೇ ಗರಿಷ್ಠ ಪ್ರಮಾಣದ್ದಾಗಿದೆ. ನಂತರ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸುಪ್ರಿಂ ಕೋರ್ಟ್​ ಮಾರ್ಗಸೂಚಿಗಳ ಪ್ರಕಾರ, ಒಂದು ವೇಳೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಇತರೆ ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯೂ ಜೀವಾವಧಿ ಶಿಕ್ಷೆಯೊಂದಿಗೆ ಒಳಪಡುತ್ತದೆ. ಆ ಎರಡೂ ಶಿಕ್ಷೆಗಳು ಅಪರಾಧಿಗೆ ಏಕಕಾಲದಲ್ಲಿ ಜಾರಿಯಾಗಲಿದೆ. ಅದರಂತೆ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ವಿಧಿಸಲಾದ ಎರಡು ಪ್ರತ್ಯೇಕ ಶಿಕ್ಷೆಗಳು ಸಹ ಏಕ ಕಾಲದಲ್ಲಿಯೇ ಜಾರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:ಕೊಲೆ, ಅಪರಾಧಿಕ ಒಳಸಂಚು ಹಾಗೂ ಸಾಕ್ಷ್ಯನಾಶ ಆರೋಪದಡಿ ಬಾಗೇಪಲ್ಲಿಯ ರಾಮಚಂದ್ರಾ ರೆಡ್ಡಿ ಮತ್ತು ಚಿಂತಾಮಣಿಯ ಸುಕುಮಾರ್ ವಿರುದ್ಧ 2002ರ ಸೆಪ್ಟೆಂಬರ್​ 3 ರಂದು ಪ್ರಕರಣ ದಾಖಲಾಗಿತ್ತು. 2010 ರ ನವೆಂಬರ್​ 25ರಂದು ಈ ಪ್ರಕರಣಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯ, ಈ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ ವಿಧಿಸಿತ್ತು. ದರೋಡೆಗೆ ಪ್ರಯತ್ನಿಸಿದಾಗ ಸ್ವಯಂ ಪ್ರೇರಿತವಾಗಿ ನೋವು ಉಂಟುಮಾಡಿದ ಪ್ರಕರಣದಲ್ಲಿ 10 ವರ್ಷ ಜೈಲುಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿತ್ತು. ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು.

ಇದನ್ನು ಪ್ರಶ್ನಿನಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಅಧೀನ ನ್ಯಾಯಾಲಯವು ತನ್ನ ಆದೇಶದಲ್ಲಿ ಜೀವಾವಧಿ ಶಿಕ್ಷೆ ಮತ್ತು 10 ವರ್ಷ ಶಿಕ್ಷೆಯ ಒಟ್ಟಿಗೆ ಅನುಭವಿಸಬೇಕೇ ಅಥವಾ ಒಂದು ಶಿಕ್ಷಾ ಅವಧಿ ಪೂರೈಸಿದ ನಂತರ ಮತ್ತೊಂದನ್ನು ಅನುಭವಿಸಬೇಕೇ? ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದ 2002ರ ಸೆ. 22ರಿಂದ ಜೈಲಿನಲ್ಲಿದ್ದು, ಒಟ್ಟು 22 ವರ್ಷ ಶಿಕ್ಷೆ ಪೂರೈಸಿರುವ ತಮಗೆ, ಕ್ಷಮದಾನ ಕೋರಲು ಮತ್ತು ಅವಧಿಪೂರ್ವ ಬಿಡುಗಡೆಗೆ ಕೋರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಿಕ್ಷಾವಧಿ ಪೂರೈಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ಹಣ ನೀಡಲು ಬೆದರಿಕೆ ಆರೋಪ: ಆರ್‌ಎಸ್‌ಎಸ್ ಕಾರ್ಯಕರ್ತನ ವಿರುದ್ಧದ ಪ್ರಕರಣ ರದ್ದು

ABOUT THE AUTHOR

...view details