ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದೆ. 24 ಸಚಿವರ ಪ್ರಮಾಣ ವಚನ ಸ್ವೀಕಾರದ ಮೂಲಕ ಒಟ್ಟು 34 ಸಚಿವರ ಸಂಪುಟ ರಚನೆಯಾಗಿದೆ. ಸಾಕಷ್ಟು ಕಸರತ್ತು ಬಳಿಕ 24 ಶಾಸಕರಿಗೆ ಸಚಿವ ಭಾಗ್ಯ ಸಿಕ್ಕಿದೆ. ಆದರೆ ಇತ್ತ ಕಾಂಗ್ರೆಸ್ಗೆ ವಲಸೆ ಬಂದವರಿಗೆ ಮಂತ್ರಿ ಭಾಗ್ಯ ಸಿಗದೇ ಇರುವುದು ಕುತೂಹಲ ಮೂಡಿಸಿದೆ.
ಶನಿವಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಶನಿವಾರ 24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದೆ. ಬಹಳ ಅಳೆದು ತೂಗಿ ಸಂಪುಟ ರಚನೆ ಮಾಡಲಾಗಿದೆ. ಜಾತಿ ಸಮೀಕರಣ, ಹೊಸಬರು, ಹಿರಿಯರ ಸಮ್ಮಿಲನದೊಂದಿಗೆ ಸಚಿವ ಸಂಪುಟ ರಚಿಸಲಾಗಿದೆ.
ಕಳೆದ ಒಂದು ವಾರದಿಂದ ಸಂಪುಟ ಕಸರತ್ತು ನಡೆಸಲಾಗುತ್ತಿದೆ. ಸಚಿವ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಭಾರಿ ಲಾಬಿ ನಡೆಸುತ್ತಿದ್ದರು. ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ ಸಂಪುಟ ರಚನೆ ಅನಿವಾರ್ಯತೆ ಇತ್ತು. ಸಾಕಷ್ಟು ಲಾಬಿ ಬಳಿಕ ಅಳೆದು ತೂಗಿ ಕಾಂಗ್ರೆಸ್ ಹೈ ಕಮಾಂಡ್ ಸಂಪುಟ ರಚನೆ ಮಾಡಿದೆ. ಆದರೆ ಅಚ್ಚರಿ ಎಂದರೆ ಯಾವೊಬ್ಬ ವಲಸಿಗನಿಗೂ ಸಚಿವ ಭಾಗ್ಯ ಲಭಿಸಿಲ್ಲ.
ವಲಸಿಗರಿಲ್ಲ ಸಚಿವ ಭಾಗ್ಯ: ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್ಗೆ ವಲಸೆ ಬಂದು ಚುನಾಯಿತರಾದ ಯಾವ ಶಾಸಕರಿಗೂ ಮಂತ್ರಿ ಭಾಗ್ಯ ಸಿಕ್ಕಿಲ್ಲ. ಚುನಾವಣೆ ಪೂರ್ವ ಟಿಕೆಟ್ ಸಿಗದ ಹಿನ್ನೆಲೆ ಜೆಡಿಎಸ್ ಹಾಗೂ ಬಿಜೆಪಿಯಿಂದ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಸ್ಪರ್ಧಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.
ಪ್ರಮುಖವಾಗಿ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್, ಕೂಡ್ಲಿಗಿ ಶಾಸಕರಾಗಿದ್ದ ಶಾಸಕ ಎನ್.ವೈ.ಗೋಪಾಲಕೃಷ್ಣ, ಯು.ಬಿ.ಬಣಕಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ, ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಗೆದ್ದು ಬೀಗಿದ್ದಾರೆ. ಆದರೆ ವಲಸಿಗರಿಗೆ ಯಾವ ಖಾತೆಯನ್ನೂ ನೀಡಿಲ್ಲ.
ಲಕ್ಷ್ಮಣ್ ಸವದಿ ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಭರ್ಜರಿ ಗೆಲುವು ಸಾಧಿಸಿ, ಮಂತ್ರಿಗಿರಿಯ ರೇಸ್ನಲ್ಲಿದ್ದರು. ಲಕ್ಷ್ಮಣ್ ಸವದಿಗೆ ಈ ಬಾರಿ ಸಚಿವ ಸ್ಥಾನ ಖಚಿತ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಸವದಿಗೆ ಮಂತ್ರಿಭಾಗ್ಯ ಕೈ ತಪ್ಪಿದೆ.
ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಚುನಾವಣೆಯಲ್ಲಿ ಸೋಲುಣ್ಣಬೇಕಾಯಿತು. ಹೀಗಾಗಿ ಶೆಟ್ಟರ್ರನ್ನು ಪರಿಷತ್ ಸದಸ್ಯ ಮಾಡಿ ಮಂತ್ರಿಗಿರಿ ನೀಡುವ ಇರಾದೆಯಲ್ಲಿ ಹೈ ಕಮಾಂಡ್ ಇತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಹೆಸರನ್ನೂ ಕೈ ಬಿಡಲಾಗಿದೆ.
ಇನ್ನು ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಗೆದ್ದಿರುವ ಎನ್.ವೈ. ಗೋಪಾಲಕೃಷ್ಣ, ಯು.ಬಿ.ಬಣಕಾರ್ಗೂ ಈ ಬಾರಿ ಮಂತ್ರಿ ಸ್ಥಾನ ಸಿಕ್ಕಿಲ್ಲ. ಉಳಿದಂತೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿರುವ ಶಿವಲಿಂಗೇಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಕೂಡ ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಆದರೆ ಹೈ ಕಮಾಂಡ್ ಯಾರಿಗೂ ಮಂತ್ರಿಪಟ್ಟ ನೀಡದೇ ಇರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ರಾಷ್ಟ್ರದ ಹೆಮ್ಮೆಯ ಪ್ರತೀಕ ರಾಜದಂಡವನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದ ಅಧೀನ