ಬೆಂಗಳೂರು : ಪಡಿತರ ವ್ಯವಸ್ಥೆಯಡಿ ರಾಜ್ಯದಲ್ಲಿ ವಿತರಿಸುವ ಆಹಾರ ಧಾನ್ಯಗಳಿಗೆ ಕನಿಷ್ಠ ದರ ನಿಗದಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ನಗರದ ಸಿದ್ಧಯ್ಯ ಪುರಾಣಿಕ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ "ಸಂರಕ್ಷಣ ಕ್ಷಮತಾ ಮಹೋತ್ಸವ (ಸಕ್ಷಮ್)-2021 ಕರ್ನಾಟಕ ವೇಬಿನಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ, ತೈಲ ಪ್ರಾಕೃತಿಕ ಸಂಪತ್ತಾಗಿದ್ದು ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ತೈಲ ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಬಿಎಂಟಿಸಿ, ಕೆಎಸ್ಆರ್ಟಿಸಿ ಚಾಲಕರಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದರು.
ವಿವಿಧ ಡಿಪೋಗಳಿಗೆ ಪ್ರಶಸ್ತಿ ಪ್ರದಾನ ರಾಜ್ಯದ 9 ಡಿಪೋ ಅತ್ಯುತ್ತಮ ಇಂಧನ ದಕ್ಷತೆ ತೋರಿದ್ದು, ಅವುಗಳಿಗೆ ತಲಾ 50 ಸಾವಿರ ರೂಪಾಯಿಗಳ ಬಹುಮಾನ ವಿತರಿಸಲಾಗಿದೆ.. ಬಿಎಂಟಿಸಿ 5 ಲಕ್ಷ ರೂ. ಬಹುಮಾನಕ್ಕೆ ಭಾಜನವಾಗಿದೆ.. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಅವರು ಪ್ರೋತ್ಸಾಹಿಸಿದರು.
ಉಜ್ವಲ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಅನಿಲ ಭಾಗ್ಯ ಯೋಜನೆಯಲ್ಲಿ 97 ಸಾವಿರ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಹೆಚ್ಚುವರಿಯಾಗಿ 3 ಸಿಲಿಂಡರ್ ಉಚಿತವಾಗಿ ವಿತರಿಸಲಾಗಿದೆ. ಸಾರಿಗೆ ವಾಹನ ಮತ್ತು ಸರಕು ವಾಹನಗಳಿಂದ ಪರಿಸರಕ್ಕೆ ಹೆಚ್ಚು ಮಾಲಿನ್ಯ ಉಂಟಾಗುತ್ತದೆ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನಗಳನ್ನು ಸುಸ್ಥಿತಿಯಲ್ಲಿಡಲು ಅರಿವು ಮೂಡಿಸಲಾಗುತ್ತಿದೆ. ವಾಹನಗಳನ್ನು ಸುಸ್ಥಿತಿಯಲ್ಲಿಡಲು, ಇಂಧನ ಉಳಿತಾಯ ಮಾಡಲು ಸಕ್ಷಮ್ ಕಾರ್ಯಕ್ರಮ ಪೂರಕವಾಗಿದೆ.ಇಂಡಿಯನ್ ಆಯಿಲ್ ರಾಜ್ಯ ಮುಖ್ಯಸ್ಥ ಡಿ.ಎಲ್ ಪ್ರಮೋದ ಮಾತನಾಡಿ, ಪೆಟ್ರೋಲಿಯಂ ಸೇರಿದಂತೆ ಶೇಕಡಾ 80ರಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂಪತ್ತನ್ನು ಮಿತವ್ಯಯವಾಗಿ ಬಳಸುವಂತೆ ಅರಿವು ಮೂಡಸಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನವರಿ 15ರಿಂದ ಫೆಬ್ರವರಿ 15ರವರೆಗೆ ಒಂದು ತಿಂಗಳ ಅರಿವು ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾದ ಅನಿಲ್ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಸೇರಿದಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.. ನಂತರ ಇಂಧನ ದಕ್ಷತೆ ತೋರಿದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿಯ ವಿವಿಧ ಡಿಪೋಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.