ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ವಿಧಾನಸಭೆಯಲ್ಲಿ ಟೀಕಿಸಿದರು. ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಸೋದ್ಯಮವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬಹುದು. ಆದರೆ, ಆರೋಗ್ಯ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ಹೇಗೆ ಸಾಧ್ಯ?. ಸರ್ಕಾರಕ್ಕೆ ಶಕ್ತಿ ಇಲ್ಲವೆ? ಸರ್ಕಾರ ಆರೋಗ್ಯ ಇಲಾಖೆಗೆ ಹೆಚ್ಚು ಸೌಲಭ್ಯ ಕೊಡಬೇಕು. ಖಾಸಗಿ ಸಹಭಾಗಿತ್ವಕ್ಕೆ ಹೋಗಬಾರದು ಎಂದು ಒತ್ತಾಯಿಸಿದರು.
ಬಜೆಟ್‍ನಲ್ಲಿ ನೀರಾವರಿ, ವಿದ್ಯುತ್ಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಬರೀ ಐದು ಗ್ಯಾರಂಟಿಗಳ ಬಜೆಟ್ ಆಗಿದೆ. ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಚಿಂತನೆ ಮಾಡಬೇಕು. ಹೇಮಾವತಿ ಕಾಲುವೆ ಮುಚ್ಚಿ ಹೋಗುತ್ತಿದೆ. ಪ್ರತಿ ವರ್ಷ ಹೊಸ ಕಾಲುವೆ ಮಾಡಿದರೂ ಮುಚ್ಚಿ ಹೋಗುತ್ತವೆ. ರೈತರು ಬದುಕಬೇಕೋ ಅಥವಾ ಗುತ್ತಿದಾರರು ಬದುಕಬೇಕೋ? ಎಂದು ಪ್ರಶ್ನಿಸಿದರು.
ಅಬಕಾರಿ ತೆರಿಗೆ ಶೇ. 20ರಷ್ಟು ಹೆಚ್ಚಳ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುತ್ತಾರೆ. ಸಂಜೆ ಆಯಾಸ ಪರಿಹಾರಕ್ಕೆ ಮದ್ಯ ಸೇವಿಸುತ್ತಾರೆ. ತೆರಿಗೆ ಹೆಚ್ಚಳ ಮಾಡಿದರೆ ಅವರು ಏನು ಮಾಡಬೇಕು ಎಂದರು.
ಆಗ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಮಧ್ಯೆ ಪ್ರವೇಶ ಮಾಡಿ, ಕುಡಿಯುವುದನ್ನು ಕಡ್ಡಾಯ ಮಾಡಿಲ್ಲ ಎಂದರು. ಮದ್ಯದ ಮೇಲೆ 20% ತೆರಿಗೆ ಹೆಚ್ಚಳ ವಿಚಾರಕ್ಕೆ ವ್ಯಂಗ್ಯವಾಡಿದ ಕೃಷ್ಣಪ್ಪ ಅವರು, ಮದ್ಯದ ಮೇಲೆ 20% ತೆರಿಗೆ ಹೆಚ್ಚಿಸಿದ್ದಾರೆ. ಸ್ಲ್ಯಾಬ್ ಅಂತ ಹೇಳಿ ಹೆಚ್ಚಳ ಮಾಡಲಾಗಿದೆ. ಸ್ಲ್ಯಾಬ್ ಅಂದ್ರೇನು ಯಾರಿಗಾದರೂ ಗೊತ್ತಾ..? ತೆರಿಗೆ ಹೆಚ್ಚಿಸಿರುವುದು ಪೆಗ್ ಗಾ? ಕ್ವಾಟರ್ ಗಾ..? ಬಾಟಲ್ ಗಾ..? ಅಂತ ಗೊತ್ತಾಗಲಿಲ್ಲ. ನಾನೂ ಬಜೆಟ್ ಓದಿದೆ, ಲಿಕ್ಕರ್ ಶಾಪ್ ಇಟ್ಟಿರೋರು ಸ್ಲ್ಯಾಬ್ ಅಂದ್ರೇನು ಹೇಳಿ ಎಂದರು.