ಬೆಂಗಳೂರು: ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಮಾಡುವುದಿಲ್ಲ. ಆದರೆ, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ವಿಧಾನಸೌಧದಲ್ಲಿ ಇಂದು ಸಂಜೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲಾಕ್ಡೌನ್ ಮಾಡುವಂತ ಪರಿಸ್ಥಿತಿಯಿಲ್ಲ. ನಾಳೆ ಮುಖ್ಯಮಂತ್ರಿಗಳು, ರಾಜ್ಯಪಾಲರ ಜೊತೆ ಸರ್ವಪಕ್ಷ ಸಭೆ ಬಳಿಕ ಹೊಸ ಮಾರ್ಗಸೂಚಿ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ಕರ್ಫ್ಯೂ ವಿಸ್ತರಣೆ ಸೇರಿದಂತೆ ಬಿಗಿ ನಿಯಂತ್ರಣದ ಕುರಿತು ನಾಳೆ ತೀರ್ಮಾನಿಸುತ್ತೇವೆ. ರಾಜ್ಯಪಾಲರ ಅಭಿಪ್ರಾಯ ಪಡೆದ ನಂತರ ಅಂತಿಮವಾಗಿ ಸಿಎಂ ಮಾರ್ಗಸೂಚಿ ಪ್ರಕಟಿಸುತ್ತಾರೆ ಎಂದರು.
ಬೆಂಗಳೂರಿಗೆ ಕಠಿಣ ನಿಯಮ:
ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ನಾಳೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇಂದು ಸಭೆ ನಡೆಸಲಾಯಿತು. ಮುಂದಿನ ಎರಡು ತಿಂಗಳು ಕಷ್ಟದ ಸಂದರ್ಭ ಇರುವುದರಿಂದ ಎರಡು ತಿಂಗಳು ನಿಭಾಯಿಸಲು, ಕಠಿಣ ನಿಯಮ ತರಲು ಸಭೆ ಕರೆದಿದ್ದೆವು. ಎಲ್ಲರೂ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಮುಖವಾಗಿ ಕಳೆದ ಬಾರಿ ಕೋವಿಡ್ ವೇಳೆ ಕೈಗೊಂಡ ಕ್ರಮಗಳಿಗೆ ಪ್ರತಿ ಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿದವು ಎಂದು ತಿಳಿಸಿದರು.
ಆಕ್ಸಿಜನ್, ಬೆಡ್ ಸಮಸ್ಯೆ ನಿವಾರಣೆ :
ಆಕ್ಸಿಜನ್ ಕೊರತೆ ಇರುವ ಬಗ್ಗೆ ಚರ್ಚೆ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಿಲಿಂಡರ್ ಇಡಲು ಸ್ಥಳವಿಲ್ಲ. ಜಿಂದಾಲ್ ಮಾಲೀಕರ ಜೊತೆ ಮಾತನಾಡಿದ್ದು, ಆಕ್ಸಿಜನ್ ನೀಡಲು ಒಪ್ಪಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಬಂದಿದ್ದು. ಈಗಾಗಲೇ ನಾಲ್ಕೈದು ಜನರನ್ನ ಬಂಧಿಸಿದ್ದಾರೆ. ಗಡಿ ಭಾಗದಲ್ಲಿ ಇಂತ ಕೆಲಸ ನಡೆಯುತ್ತಿದ್ದು, ಅವರನ್ನ ವಶಕ್ಕೆ ಪಡೆಯಲಾಗಿದೆ. ಬೆಡ್ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಮೂರ್ನಾಲ್ಕು ದಿನದಲ್ಲಿ ಖಾಸಗಿ ಆಸ್ಪತ್ರೆ ಬೆಡ್ ನೀಡಲು ಒಪ್ಪಿದ್ದಾರೆ. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಎಂಟು ಗಂಟೆಗೆ ನೈಟ್ ಕರ್ಫೂ ಮಾಡೋದಕ್ಕೆ ವಿರೋಧ ಇದೆ ಎಂದು ಮಾಹಿತಿ ನೀಡಿದರು.
ಆಕ್ಸಿಜನ್ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದೇವೆ. ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ನಿಗ್ರಹಕ್ಕೆ ಸಲಹೆ ಬಂದಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವು ಫಾರ್ಮಾಸಿಸ್ಟ್ ಗಳೂ ಇದರಲ್ಲಿ ಶಾಮೀಲಾಗಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬೆಡ್ ಗಳ ಸಮಸ್ಯೆ ಬಗೆಹರಿಸಲು ಶಾಸಕರಿಂದ ಸಲಹೆ ಬಂದಿದ್ದು, ಬೆಡ್ ಗಳನ್ನು ಖಾಸಗಿಯವರಿಂದ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ಬೆಡ್ ಸಮಸ್ಯೆಗೆ ನೋಡಲ್ ಆಫೀಸರ್ ನೇಮಕ ಆಗಿದೆ ಎಂದರು.
ಇನ್ನಷ್ಟು ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಈ ಬಾರಿಯೂ ಕಳೆದ ಬಾರಿಯಂತೆ ಕ್ರಮ ಕೈಗೊಳ್ಳಲು ಸಲಹೆಗಳು ಬಂದಿವೆ. ಐಸೋಲೇಷನ್ ನಲ್ಲಿರೋರು ಓಡಾಡ್ತಿದಾರೆ. ನಿಯಂತ್ರಿಸಲು ಸಲಹೆ ಬಂದಿದ್ದು, ಬಿಯು ಸಂಖ್ಯೆ ಕೂಡಲೇ ಸಿಗುವಂತೆ ವ್ಯವಸ್ಥೆ ಮಾಡಲು ಸಲಹೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ರೆಮ್ಡೆಸಿವಿರ್ ಕೊರತೆ ಇಲ್ಲ :
ರೆಮ್ಡೆಸಿವಿರ್ ಕೊರತೆ ಇಲ್ಲ. ಸಾಕಷ್ಟು ದಾಸ್ತಾನಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಸಮಸ್ಯೆ ಇದೆ. ಅಗತ್ಯ ಇರೋರಿಗೆ ಮಾತ್ರ ರೆಮ್ಡೆಸಿವಿರ್ ಕೊಡಲು ಸೂಚಿಸಲಾಗಿದೆ. ಎಲ್ಲರಿಗೂ ಕೊಡದಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆ್ಯಂಬುಲೆನ್ಸ್ ವ್ಯವಸ್ಥೆಯಲ್ಲಿ ವ್ಯತ್ಯಾಸ ಇಲ್ಲದಂತೆ ಕ್ರಮ ಕೈಗೊಂಡಿದ್ದು, 49 ಆ್ಯಂಬುಲೆನ್ಸ್ ಗಳು ಹೆಣ ಸಾಗಿಸಲು ನಿಯೋಜನೆ ಮಾಡಲಾಗಿದೆ. ಚಿತಾಗಾರದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದರು.
ಸೌದೆಯಲ್ಲಿ ಹೆಣಗಳನ್ನು ಸುಡಲು ಮುಂದಿನ ದಿನಗಳಲ್ಲಿ ಅಗತ್ಯ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿ ಜಾಗ ಹುಡುಕುತ್ತಿದ್ದೇವೆ ಎಂದ ಅವರು, 487 ಲಸಿಕೆ ಕೇಂದ್ರಗಳು ಬೆಂಗಳೂರಿನಲ್ಲಿವೆ. 144 ಸೆಕ್ಷನ್ ಹಾಕಲು ಕೆಲವರು ಸಲಹೆ ಕೊಟ್ಟದ್ದಾರೆ. ಲಾಕ್ ಡೌನ್ ಬೇಡ ಎಂಬ ಸಲಹೆ ಕೊಟ್ಟಿದ್ದಾರೆ. ಈ ಎಲ್ಲದರ ಬಗ್ಗೆ ಸಿಎಂ ಅವಲೋಕನ ಮಾಡಿದ್ದಾರೆ ಎಂದು ಹೇಳಿದರು.
ಕೊನೆಯ ಕ್ಷಣದಲ್ಲಿ ಸಭೆ ಕರೆದಿರೋದಕ್ಕೆ ವಿಪಕ್ಷ ಶಾಸಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಹಾರಾಷ್ಟ್ರದಲ್ಲೂ ಇದೇ ರೀತಿ ಇದೆ. ಇಲ್ಲಿ ಪಕ್ಷ ಬರುವುದಿಲ್ಲ. ಸೋಂಕು ನಿಯಂತ್ರಿಸಲು ಕ್ರಮ ಆಗಬೇಕು. ರಾಜಕಾರಣ ಬಿಟ್ಟು, ಎಲ್ಲರಿಗೂ ನಾವು ಮಾಡಲ್ ಆಗಬೇಕು ಎಂದರು.
ರಂಜಾನ್ ಹಿನ್ನೆಲೆ ಕೆಲವು ಸಲಹೆ ಬಂದಿದೆ. ಆದರೆ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರಿಗೂ ಒಂದೇ ಕಾನೂನು ಮಾಡಲಾಗುವುದು. ರಾಮನವಮಿಗೂ ನಿರ್ಬಂಧ ಹಾಕುತ್ತೇವೆ. ರಾಮ, ರಹೀಮ, ಏಸುಗೂ ಎಲ್ಲದಕ್ಕೂ ಒಂದೇ ಕಾನೂನು ಎಂದು ಹೇಳಿದರು.
ಪರ್ಯಾಯ ಮಾರುಕಟ್ಟೆ :
ಕೆ.ಆರ್ ಮಾರುಕಟ್ಟೆ ಸೇರಿದಂತೆ ಹಲವೆಡೆ ಜನಜಂಗುಳಿ ಸೇರುತ್ತಿರುವ ಹಿನ್ನೆಲೆ ಪರ್ಯಾಯ ಮಾರುಕಟ್ಟೆ ಮಾಡಲು ಉದ್ದೇಶಿಸಲಾಗಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಕಳೆದ ಬಾರಿ ಮಾಡಿದಂತೆ, ಬೇರೆ ಕಡೆ ಮಾರುಕಟ್ಟೆ ನಿರ್ಮಾಣಕ್ಕೆ ಸೂಚನೆ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಆ ಕೆಲಸವೂ ಆಗಲಿದೆ ಎಂದು ಸಂಪೂರ್ಣ ಮಾಹಿತಿ ನೀಡಿದರು.