ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರ, ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು, ಅನರ್ಹಗೊಳ್ಳುವುದು ಮತ್ತು ಮರಣವನ್ನಪ್ಪಿದಲ್ಲಿ ಅದೇ ಹುದ್ದೆಗೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 15 ತಿಂಗಳ ನಿಷೇಧಿತ ಅವಧಿಯ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಯಲಹಂಕ ತಾಲೂಕಿನ ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪ್ರೀತಿ ಮುನೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಈ ಆದೇಶ ನೀಡಿದೆ.
ಅಲ್ಲದೇ, ಚುನಾವಣಾ ಫಲಿತಾಂಶದ ದಿನಾಂಕದಿಂದ 15 ತಿಂಗಳ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಎರಡನೇ ಅವಧಿಯಗೆ ಇದನ್ನು 30 ತಿಂಗಳ ಮುಕ್ತಾಯ ದಿನದಿಂದ ಲೆಕ್ಕ ಹಾಕಲಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗೆ ಆಯ್ಕೆಯಾದವರಿಗೆ ಕನಿಷ್ಠ 15 ತಿಂಗಳ ನಿಷೇಧ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಪಡಿಸಿದೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಸೆಕ್ಷನ್ 46 ಮತ್ತು 49ರ ತಿದ್ದುಪಡಿ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ, ಗ್ರಾಮ ಪಂಚಾಯತ್ಗೆ 5 ವರ್ಷಗಳ ಅವಧಿಗೆ ಚುನಾವಣೆ ನಡೆದರೂ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು 30 ತಿಂಗಳಿಗೆ ಇಳಿಕೆ ಮಾಡಿ ಎರಡು ಅವಧಿಯನ್ನಾಗಿಸಲಾಗಿದೆ. ಮೀಸಲು ಸೌಲಭ್ಯದಂತೆ ಸೆಕ್ಷನ್ 43ರಲ್ಲಿ ತಿಳಿಸಿರುವಂತೆ ಅವಿಶ್ವಾಸ ನಿರ್ಣಯವನ್ನು 30 ತಿಂಗಳಿನಿಂದ 15 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಆದರೆ, ಮೊದಲ ಅವಧಿಯಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರು ರಾಜೀನಾಮೆ, ಅನರ್ಹಗೊಳಿಸುವುದು, ಸಾವನ್ನಪ್ಪಿದಾಗ ಮೊದಲನೇ ಅವಧಿ 30 ತಿಂಗಳು ಮತ್ತು ಎರಡನೇ ಅವಧಿಗೂ 30 ತಿಂಗಳು ಇದೆ. ಈ ನಿಟ್ಟಿನಲ್ಲಿ ರಾಜೀನಾಮೆಯಿಂದ ಆಯ್ಕೆಯಾದವರಿಗೆ 15 ತಿಂಗಳ ಒಳಗಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.