ಬೆಂಗಳೂರು :ಇಂದು ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಿಸಲಾಯ್ತು. ಈ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕಾಂಗ್ರೆಸ್ನಲ್ಲಿ ಇಂದಿಗೂ ಪ್ರಜಾಪ್ರಭುತ್ವವಿಲ್ಲ ಎಂದರು.
‘ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ’
ನಗರದ ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಇವರು, ವ್ಯಕ್ತಿಗತ ಸ್ವಾರ್ಥಕ್ಕೆ ನ್ಯಾಯಾಂಗದ ತೂಗುಗತ್ತಿಯಿಂದ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಲಾಗಿತ್ತು. ತನ್ನನ್ನು ವಿರೋಧಿಸುವ ಎಲ್ಲಾ ನಾಯಕರನ್ನು ಜೈಲಿಗೆ ತಳ್ಳಿದ್ರು. ಮಹಿಳೆಯರು ಮಕ್ಕಳು ಅಂತಾನೂ ನೋಡದೇ ಜೈಲಿಗೆ ಕಳುಹಿಸಿ ಚಿತ್ರಹಿಂಸೆ ಮಾಡಿದ್ರು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಆರೋಪಿಸಿದ್ದಾರೆ.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಕರಾಳ ದಿನ ತೆರೆದಿಟ್ಟರು. ಇದರಿಂದ ಸಂಕಷ್ಟಕ್ಕೆ ಒಳಗಾದ ಸಾವಿರಾರು ಜನ ಇನ್ಯಾವತ್ತೂ ಈ ಘಟನೆ ಮರುಕಳಿಸದಂತೆ ಎಚ್ಚರಿಕೆಯಿಂದ ಇರುವಂತೆ ಅವರು ಆಗಾಗ ನೆನಪಿಸಿಕೊಳ್ತಾರೆ. ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆಯಬೇಕು ಅನ್ನೋ ಮನೋಭಾವನೆಯಿಂದ ತುರ್ತು ಪರಿಸ್ಥಿತಿ ವಿಧಿಸಿದ್ದರು ಎಂದು ದೂರಿದರು.